ಹೈದರಾಬಾದ್: ಬಾಲಿವುಡ್ ಸ್ಟಾರ್ಗಳಾದ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅವರ ನಟನೆಯ 'ತು ಜೂಟಿ ಮೇ ಮಕ್ಕರ್' ಚಿತ್ರ ಇಂದು ಬಿಡುಗಡೆಯಾಗಿದೆ. ಲವ್ ರಂಜನ್ ಈ ಚಿತ್ರ ನಿರ್ದೇಶಿಸಿದ್ದಾರೆ. ಈ ಸಿನಿಮಾ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಟ್ವಿಟರ್ನಲ್ಲಿ ಈ ಕುರಿತು ಸಕಾರಾತ್ಮಕ ಅಭಿಪ್ರಾಯಗಳನ್ನು ಜನರು ಹಂಚಿಕೊಳ್ಳುತ್ತಿದ್ದಾರೆ. ಚಿತ್ರ ಇಂದು ಡಬ್ಬಲ್ ಡಿಜಿಟ್ನೊಂದಿಗೆ ಮೊದಲ ದಿನವೇ ಉತ್ತಮ ಗಳಿಕೆ ಕಾಣುತ್ತಿದ್ದು, ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಹಿಂದೆ 'ಶಂಶೇರಾ' ಚಿತ್ರದಲ್ಲಿ ಆ್ಯಕ್ಷನ್ ಪಾತ್ರ ಮತ್ತು 'ಬ್ರಹ್ಮಾಸ್ತ್ರ'ದಲ್ಲಿ ಫ್ಯಾಂಟಸಿ ಡ್ರಾಮದ ಮೂಲಕ ಪ್ರೇಕ್ಷಕರ ಮನರಂಜಿಸಿದ ನಟ ರಣಬೀರ್, 'ತು ಜೂಟಿ ಮೇ ಮಕ್ಕರ್' ಚಿತ್ರದಲ್ಲಿ ಮತ್ತೆ ಲವರ್ ಕಂ ಕಾಮಿಡಿ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ರಣಬೀರ್ ಜೋಡಿಯಾಗಿರುವ ಶ್ರದ್ಧಾ ನಡುವಿನ ಕಿತ್ತಾಟದ ಪ್ರೇಮ ಕಾವ್ಯವನ್ನು ಈ ಚಿತ್ರ ಹೊಂದಿದೆ. ಸಂಬಂಧದಲ್ಲಿ ವಿಭಿನ್ನ ಅಭಿರುಚಿ ಹೊಂದಿದ್ದು, ಹೇಗೆ ಸಮಸ್ಯೆಗಳನ್ನು ಎದುರಿಸಿ ಅದರಲ್ಲಿ ಪರಿಹಾರ ಕಾಣುತ್ತಾರೆ ಎಂಬುದನ್ನು ನವೀರಾಗಿ ತೋರಿಸಲಾಗಿದೆ.
ಕಾಮಿಡಿ ಟೈಮಿಂಗ್ ಸೂಪರ್: ರೋಮ್ಯಾಂಟಿಕ್ ಕಾಮಿಡಿ ಮತ್ತು ಕೌಟುಂಬಿಕ ಎಂಟರ್ಟೈನಮೆಂಟ್ ಚಿತ್ರ ಇದಾಗಿದೆ. ಶ್ರದ್ಧಾ ಮತ್ತು ರಣಬೀರ್ ಅವರ ಜೋಡಿ ಆಕರ್ಷಣೆಯಾಗಿದೆ. ಅವರ ನಡುವಿನ ಕೆಮೆಸ್ಟ್ರಿ ಚೆನ್ನಾಗಿದೆ ಎಂದು ನೆಟಿಜನ್ಗಳು ತಿಳಿಸಿದ್ದಾರೆ. ಚಿತ್ರದಲ್ಲಿ ನಟ ರಣಬೀರ್ ಅವರ ಕಾಮಿಡಿ ಟೈಮಿಂಗ್ ಅದ್ಭುತವಾಗಿದೆ. ಇಬ್ಬರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇದೇ ವೇಳೆ ನೆಪೋಟಿಸಂ ಎಳೆಯನ್ನು ತಂದಿರುವ ಕೆಲವು ನೆಟ್ಟಿಗರು, ಎಲ್ಲ ನೆಪೊಟಿಸಂ ನಟ ನಟಿಯರು ನಟನೆಯಲ್ಲಿ ಕಳಪೆ ಹೊಂದಿರುವುದಿಲ್ಲ ಎಂದು ಅವರು ತೋರಿಸಿದ್ದಾರೆ.