ಲವ್ ರಂಜನ್ ನಿರ್ದೇಶನದ ತೂ ಜೂಟಿ ಮೇ ಮಕ್ಕರ್ ಸಿನಿಮಾ ಹೋಳಿ ಸಂದರ್ಭ ಬಿಡುಗಡೆ ಅಗಿದೆ. ಬಾಲಿವುಡ್ ಬೇಡಿಕೆ ತಾರೆಯರಾದ ರಣ್ಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿದ್ದು, ಈ ಚಿತ್ರ ಇಂದು ತೆರೆಕಂಡಿದೆ. ಕಲೆಕ್ಷನ್ ವಿಚಾರದಲ್ಲಿ ಪ್ರೇಕ್ಷಕರ ಸ್ಪಂದನೆ ಸಕಾರಾತ್ಮಕವಾಗಿದೆ.
ತೂ ಜೂಟಿ ಮೇ ಮಕ್ಕರ್ ಸಿನಿಮಾ ಹೋಳಿ ಸಂದರ್ಭದ ಪ್ರಯೋಜನ ಪಡೆಯುವುದು ಖಚಿತ. ಮೊದಲ ದಿನ ಕುಟುಂಬಸ್ಥರು, ಸ್ನೇಹಿತರೊಂದಿಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸಿನಿಮಾ ವೀಕ್ಷಿಸುತ್ತಿದ್ದು, ಮೊದಲ ವಾರದಲ್ಲಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ. ಆರಂಭಿಕ ಟ್ರೆಂಡ್‌ಗಳ ಆಧಾರದ ಮೇಲೆ ಚಿತ್ರವು ಈ ವರ್ಷ ಪಠಾಣ್ ಸಿನಿಮಾ ನಂತರ ಎರಡನೇ ಅತಿ ಹೆಚ್ಚು ಗಳಿಕೆ ಮಾಡುವ ಸಾಧ್ಯತೆಯಿದೆ.
ವರದಿಗಳ ಪ್ರಕಾರ, ತೂ ಜೂಟಿ ಮೇ ಮಕ್ಕರ್ ಸಿನಿಮಾ ಸುಮಾರು 3,302 ಪರದೆಗಳಲ್ಲಿ ಪ್ರದರ್ಶನವಾಗುತ್ತಿದ್ದು, ಇಂದು ಸಂಜೆ 7 ಗಂಟೆವರೆಗಿನ ಶೋಗಳ 84,000 ಟಿಕೆಟ್‌ಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ. ಈ ಟಿಕೆಟ್ಗಳು ಸುಮಾರು 2.50 ಕೋಟಿ ರೂ. ಮೌಲ್ಯದ್ದಾಗಿದೆ.
ಮುಂಗಡ ಟಿಕೆಟ್ ಬುಕಿಂಗ್ ಪ್ರಕ್ರಿಯೆಯು ಚಿತ್ರದ ಯಶಸ್ಸನ್ನು ಸೂಚಿಸಿದೆ. ದೆಹಲಿಯಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಉತ್ತಮವಾಗಿದೆ. ಈಗಾಗಲೇ ಹಲವು ಪ್ರದರ್ಶನಗಳ ಟಿಕೆಟ್ಗಳು ಮಾರಾಟವಾಗಿವೆ.
ಬುಕ್ ಮೈ ಶೋ ಪ್ರಕಾರ, ಹಲವೆಡೆ ಟಿಕೆಟ್ ದರವೂ ಏರಿಕೆಯಾಗಿದ್ದು, ಕೆಲವು ಸ್ಥಳಗಳಲ್ಲಿ ಪಾಸ್‌ಗಳನ್ನು 1800 ರೂ.ಗೆ ಮಾರಾಟ ಮಾಡಲಾಗಿದೆ. ಈ ಹಿನ್ನೆಲೆ ಸಿನಿಮಾ ಮೊದಲ ದಿನ ಭಾರತದಲ್ಲಿ ಸುಮಾರು 10-13 ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆಯಿದೆ. ಇದು ಲವ್ ರಂಜನ್ ಅವರ ಹಿಂದಿನ ಚಿತ್ರ ಸೋನು ಕೆ ಟಿಟು ಕಿ ಸ್ವೀಟಿ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆಯನ್ನು ಮುರಿಯಲಿದೆ.
ಕಾರ್ತಿಕ್ ಆರ್ಯನ್, ಸನ್ನಿ ಸಿಂಗ್ ಮತ್ತು ನುಶ್ರತ್ ಭರುಚ್ಚಾ ಅಭಿನಯದ ಸೋನು ಕೆ ಟಿಟು ಕಿ ಸ್ವೀಟಿ ಸಿನಿಮಾ ಮೊದಲ ದಿನ 6.42 ಕೋಟಿ ರೂ. ಗಳಿಸಿತ್ತು. ಲವ್ ರಂಜನ್ ನಿರ್ದೇಶನದ ಈ ಹಿಂದಿನ ಚಿತ್ರ ಒಟ್ಟು 109 ಕೋಟಿ ರೂಪಾಯಿ ಗಳಿಸಿತು. ಪ್ರೇಕ್ಷಕರು ತೂ ಜೂಟಿ ಮೇ ಮಕ್ಕರ್ ಸಿನಿಮಾ ಮೆಚ್ಚಿಕೊಂಡರೆ ಸೋನು ಕೆ ಟಿಟು ಕಿ ಸ್ವೀಟಿ ಸಿನಿಮಾ ದಾಖಲೆಗಳು ಪುಡಿಯಾಗಲಿದೆ ಅನ್ನೋದು ಚಿತ್ರತಂಡದ ವಿಶ್ವಾಸ. ತೂ ಜೂಟಿ ಮೇ ಮಕ್ಕರ್ ಚಿತ್ರದಲ್ಲಿ ರಣ್ಬೀರ್ ಕಪೂರ್, ಶ್ರದ್ಧಾ ಕಪೂರ್ ಜೊತೆಗೆ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಅನುಭವ್ ಬಸ್ಸಿ, ಬೋನಿ ಕಪೂರ್ ಮತ್ತು ಡಿಂಪಲ್ ಕಪಾಡಿಯಾ ಕೂಡ ಮಹತ್ವದ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:ಪ್ರಿಯಾಂಕಾ ಗಾಂಧಿ ಪಿಎಯಿಂದ ನಟಿ ಅರ್ಚನಾ ಗೌತಮ್ಗೆ ಕೊಲೆ ಬೆದರಿಕೆ ಆರೋಪ.. ದೂರು ದಾಖಲು
ಶಂಶೇರಾ, ಬ್ರಹ್ಮಾಸ್ತ್ರ ಹಿಟ್ ಆದ ನಂತರ ರಣ್ಬೀರ್ ಈ ರೊಮ್ಯಾಂಟಿಕ್-ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದಾರೆ. ಶ್ರದ್ಧಾ ಕಪೂರ್ ಅವರನ್ನು ಪ್ರೀತಿಸುವ ಪ್ರೇಮಿಯಾಗಿ ರಣ್ಬೀರ್ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತಮ್ಮ ಸಂಬಂಧದಲ್ಲಿ ವಿಭಿನ್ನ ವಿಷಯಗಳನ್ನು ಬಯಸುತ್ತಾರೆ, ಅದು ಸಂಘರ್ಷಕ್ಕೂ ದಾರಿ ಮಾಡಿಕೊಡುತ್ತದೆ. ಹೇಗೆ ತಮ್ಮ ಸಂಬಂಧವನ್ನು ನಿಭಾಯಿಸುತ್ತಾರೆ ಅನ್ನೋದೇ ಸ್ಟೋರಿ. ರೊಮ್ಯಾಂಟಿಕ್ ಸೀನ್ಗಳ ಜೊತೆಗೆ ಕಾಮಿಡಿ ದೃಶ್ಯಗಳು ಸಹ ಈ ಚಿತ್ರದಲ್ಲಿದೆ.
ಇದನ್ನೂ ಓದಿ:ಸ್ಯಾಂಡಲ್ವುಡ್ನಲ್ಲಿ ಛಾಪು ಮೂಡಿಸಿರುವ ನಟಿಯರಿಗೆ ಮಹಿಳಾ ದಿನಾಚರಣೆಯ ಶುಭಾಶಯ
ಟ್ವಿಟ್ಟರ್‌ನಲ್ಲಿ ಶ್ರದ್ಧಾ ಮತ್ತು ರಣ್ಬೀರ್ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೊಮ್ಯಾಂಟಿಕ್, ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ಟೈನ್ಮೆಂಟ್ನ ಪರಿಪೂರ್ಣ ಮಿಶ್ರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ರಣ್ಬೀರ್ ಅವರ ಕಾಮಿಡಿ ಸೆನ್ಸ್ ಅನ್ನು ಇಷ್ಟಪಡುತ್ತಿದ್ದಾರೆ. ಸ್ವಜನಪಕ್ಷಪಾತದ ಆಧಾರದ ಮೇಲೆ ರಣ್ಬೀರ್ ಮತ್ತು ಶ್ರದ್ಧಾ ಅವರನ್ನು ಸಮರ್ಥಿಸಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ಗುಂಪು "ಎಲ್ಲಾ ಸ್ವಜನಪಕ್ಷಪಾತದ ಉತ್ಪನ್ನಗಳು (ಕಲಾವಿದರು) ಕೆಟ್ಟದ್ದಲ್ಲ" ಎಂದು ಅಭಿಪ್ರಾಯಪಟ್ಟಿದೆ. ಇನ್ನೂ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಅನುಭವ್ ಬಸ್ಸಿ ಅವರಿಗಿದು ಮೊದಲ ಚಿತ್ರವಾಗಿದ್ದು, ಪ್ರೇಕ್ಷಕರು ಅವರ ನಟನೆಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.