ಈ ವರ್ಷ ತೆರೆಕಂಡ ಪೌರಾಣಿಕ ಕಥೆಯಾಧಾರಿತ ಸಿನಿಮಾ 'ಆದಿಪುರುಷ್'. ಭಗವಾನ್ ಶ್ರೀರಾಮನ ಪಾತ್ರದಲ್ಲಿ ಸೌತ್ ಸೂಪರ್ಸ್ಟಾರ್ ಪ್ರಭಾಸ್ ಮತ್ತು ಸೀತೆಯ ಪಾತ್ರದಲ್ಲಿ ಬಾಲಿವುಡ್ ಬೆಡಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಿಟ್ ಆಗಿರಲಿಲ್ಲ. ಸಾಕಷ್ಟು ಟೀಕೆಗಳನ್ನು ಎದುರಿಸಿ ಪ್ರೇಕ್ಷಕರಿಂದ ನಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವೀಕರಿಸಿತ್ತು. ಇದೀಗ ಮತ್ತೊಮ್ಮೆ ಆದಿಪುರುಷ್ ಟ್ರೋಲ್ ಆಗಿದೆ. ಒಂದೆಡೆ ಚಂದ್ರಯಾನ 3 ಯಶಸ್ಸಿಗೆ ಅಭಿನಂದನೆ ಜೊತೆಗೆ ಶುಭಾಶಯ ಹರಿದುಬರುತ್ತಿದ್ದರೆ, ಆದಿಪುರುಷ್ ಚಿತ್ರದ ಕುರಿತು ನೆಗೆಟಿವ್ ಕಮೆಂಟ್ಗಳು ಈಗಲೂ ವ್ಯಕ್ತವಾಗುತ್ತಿವೆ.
ಹೌದು, ಆಗಸ್ಟ್ 23 ಕೋಟ್ಯಂತರ ಭಾರತೀಯರ ಕನಸು ನನಸಾದ ಅದ್ಭುತ ದಿನ. ಚಂದ್ರನ ದಕ್ಷಿಣ ಧ್ರುವದ ಮೇಲೆ ಭಾರತದ ಚಂದ್ರಯಾನ 3 ಗಗನ ನೌಕೆಯು ಯಶಸ್ವಿಯಾಗಿ ಲ್ಯಾಂಡ್ ಆಗಿ ಐತಿಹಾಸ ಸೃಷ್ಟಿಸಿದ ಅಮೋಘ ಕ್ಷಣ. ಈ ವಿಶೇಷ ದಾಖಲೆ ಮಾಡಿದ ಭಾರತಕ್ಕೆ ವಿಶ್ವದ ನಾನಾ ಕಡೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ ಕಡಿಮೆ ವೆಚ್ಚದಲ್ಲಿ ತಯಾರಾದ ಚಂದ್ರಯಾನ 3ಯನ್ನು ಇಟ್ಟುಕೊಂಡು 'ಆದಿಪುರುಷ್' ಸಿನಿಮಾವನ್ನು ಟ್ರೋಲ್ ಮಾಡಲಾಗುತ್ತಿದೆ.
ಆದಿಪುರುಷ್ನ ಬಜೆಟ್ಗಿಂತ ಚಂದ್ರಯಾನ 3 ಬಜೆಟ್ ಕಡಿಮೆಯಿತ್ತು. ಆದರೂ ಚಂದ್ರಯಾನ 3 ಯಶಸ್ವಿಯಾಗಿದೆ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ಆದಿಪುರುಷ್ ಅನ್ನು ಟೀಕಿಸುತ್ತಿದ್ದಾರೆ. ಸುಮಾರು 700 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ಆದಿಪುರುಷ್ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಚಿತ್ರವು ಸಂಪೂರ್ಣ ಕಳಪೆ ಪ್ರದರ್ಶನ ಕಂಡಿತು. ನಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ಆದರೆ ಚಂದ್ರಯಾನ 3 ಕೇವಲ 615 ಕೋಟಿ ರೂಪಾಯಿಯಲ್ಲಿ ತಯಾರಾಗಿ ಇತಿಹಾಸ ಬರೆಯಿತು ಎಂದು ಚಂದ್ರಯಾನ 3 ಯಶಸ್ಸನ್ನು ಆಚರಿಸುವುದರೊಂದಿಗೆ ಆದಿಪುರುಷ್ ಅನ್ನು ಟೀಕಿಸಲಾಗುತ್ತಿದೆ.