ಹೈದರಾಬಾದ್: ಟಾಲಿವುಡ್ ಸಿನಿಮಾ ರಂಗದಲ್ಲಿ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ನಟ ಅಲ್ಲು ಅರ್ಜುನ್ ಕಾಂಬಿನೇಷನ್ ಹೇಳಿ ಮಾಡಿಸಿದ ಜೋಡಿ. ಮೂರು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಈ ಜೋಡಿ, ಇದೀಗ ನಾಲ್ಕನೇ ಚಿತ್ರಕ್ಕೆ ಅಡಿ ಇಟ್ಟಿದೆ. ನಾಲ್ಕನೇ ಚಿತ್ರವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದ್ದು, ಅದಕ್ಕೆ ಬೇಕಾದ ಎಲ್ಲ ತಯಾರಿ ಕೂಡ ಮಾಡಿಕೊಳ್ಳಲಾಗುತ್ತಿದೆ. ಬಲ್ಲ ಮಾಹಿತಿ ಪ್ರಕಾರ ತ್ರಿವಿಕ್ರಮ್ ಅವರು ಈಗಾಗಲೇ ನಟ ಅಲ್ಲು ಅರ್ಜುನ್ ಅವರಿಗೆ ಚಿತ್ರ ಕಥೆಯನ್ನು ಹೇಳಿದ್ದು ಅವರು ಮೌಖಿಕವಾಗಿ ಒಪ್ಪಿಗೆ ಕೂಡ ಸೂಚಿಸಿದ್ದಾರೆ ಎಂಬ ಮಾಹಿತಿ ಇದೆ. ಸ್ಕ್ರಿಪ್ಟ್ ಕೂಡ ಬರೆದಿದ್ದು ಡಿಸೆಂಬರ್ 2023ರ ವೇಳೆಗೆ ಚಿತ್ರದ ಚಿತ್ರೀಕರಣ ಕೂಡ ಆರಂಭ ಮಾಡಲಿದ್ದಾರಂತೆ.
ಅಲ್ಲು ಅರ್ಜುನ್ ಅವರು ಸದ್ಯ ಪುಷ್ಪ: ದಿ ರೈಸ್ ಚಿತ್ರದಲ್ಲಿ ತಲ್ಲೀನರಾಗಿದ್ದಾರೆ. ಚಿತ್ರವು ಕೊನೆಯ ಹಂತದ ಶೂಟಿಂಗ್ನಲ್ಲಿದ್ದು, ಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲ. ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಬಳಿಕವೇ ಅಲ್ಲು ಅರ್ಜುನ್ ಹೊಸ ಸಿನಿಮಾಗಳ ಸ್ಕ್ರಿಪ್ಟ್ನತ್ತ ಗಮನ ಕೊಡಲಿದ್ದಾರೆ ಎಂಬ ಮಾತು ಕೂಡ ಇದೆ. ಈಗಾಗಲೇ ಅಲ್ಲು ಅರ್ಜುನ್ ಅವರನ್ನು ಹುಡುಕಿಕೊಂಡು ಹಲವು ಆಫರ್‌ಗಳು ಬರುತ್ತಿವೆ. ಆದರೆ, ಅವರೀಗ ಪುಷ್ಪ 2 ಚಿತ್ರದಲ್ಲಿ ಬ್ಯುಸಿ ಆಗಿದ್ದರಿಂದ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದಿತ್ಯ ಧರ್ ಅವರ 'ದಿ ಇಮ್ಮಾರ್ಟಲ್ ಅಶ್ವತ್ಥಾಮ' ಚಿತ್ರದಲ್ಲಿಯೂ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೂಡ ಇದೆ. ಆದರೆ, ಅದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಬಲ್ಲ ಮೂಲಗಳ ಪ್ರಕಾರ, ಅಲ್ಲು ಅರ್ಜುನ್ ಸ್ಕ್ರಿಪ್ಟ್ ಆಯ್ಕೆ ವಿಚಾರದಲ್ಲಿ ತುಸು ಜಾಗರೂಕತೆ ವಹಿಸಿಕೊಳ್ಳಲಿದ್ದು, ಯಾವ ಸಿನಿಮಾಗೆ ಅಧಿಕೃತ ಒಪ್ಪಿಗೆ ಸೂಚಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕು.