ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ ತ್ರಿಬಲ್ ರೈಡಿಂಗ್ ಸಿನಿಮಾ ಇಂದು ರಾಜ್ಯಾದ್ಯಂತ 180ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಗಾಳಿಪಟ ಸಿನಿಮಾದ ಸುಂದರ ಈಗ ಮೂವರು ಬ್ಯೂಟಿಫುಲ್ ಬೆಡಗಿಯರೊಂದಿಗೆ ರೊಮ್ಯಾನ್ಸ್ ಮಾಡುವ ಮೂಲಕ ಮತ್ತೆ ಲವರ್ ಬಾಯ್ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಿದ್ದಾರೆ
ಸಿನಿಮಾ ಆರಂಭದಲ್ಲಿ ವೈದ್ಯನಾಗಿ ಎಂಟ್ರಿ ಕೊಡುವ ಗಣೇಶ್, ಗೂಗಲ್ ನೋಡಿ ಚಿಕಿತ್ಸೆ ಕೊಡುವ ಡಾಕ್ಟರ್ ಆಗಿ ನೋಡುಗರನ್ನು ನಕ್ಕು ನಗಿಸುತ್ತಾರೆ. ಗಣೇಶ್ ಅವರ ಕಾಮಿಡಿ ಎಂಥವರನ್ನೂ ಕೂಡ ಹೊಟ್ಟೆ ಹುಣ್ಣಾಗುವಷ್ಟು ನಗಿಸುವಂತಿದೆ. ಈ ಚಿತ್ರದಲ್ಲಿ ಗಣೇಶ್ ಡಾಕ್ಟರ್, ಗಾಲ್ಫ್ ಆಟಗಾರ, ಸ್ಪೋರ್ಟ್ಸ್ ಕಾರ್ ಡೀಲರ್ ಹಾಗು ಪ್ರೀತಿಸುವ ಹುಡುಗನಾಗಿ ಗಣಿ ಅಭಿನಯಿಸಿದ್ದಾರೆ.
ಅಪ್ಪನ ಸಹಾಯ ಇಲ್ಲದೇ ತನ್ನ ದುಡಿಮೆಯಿಂದ ದೊಡ್ಡ ಸ್ಥಾನಕ್ಕೆ ಬರಬೇಕು ಅಂದುಕೊಳ್ಳುವ ಮಹೇಶ್ (ಗಣೇಶ್) ಜೀವನದಲ್ಲಿ ರಮ್ಯಾ, ರಕ್ಷಿತಾ, ರಾಧಿಕಾ ಎಂಟ್ರಿಯಾಗುತ್ತಾರೆ. ಈ ಮೂವರು ನಾಯಕಿಯರಲ್ಲಿ ಇಬ್ಬರು ನಾಯಕಿಯರು ಗಣೇಶನನ್ನು ಏಕೆ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ ಅನ್ನೋದು ಈ ಚಿತ್ರದ ಕಥೆ.
ಮೂವರು ಯುವತಿಯರು ಗಣೇಶ್ ಹಿಂದೆ ಬಿದ್ದ ಈ ಸಿನಿಮಾ ಪ್ರೇಕ್ಷಕರನ್ನು ಸಹಜವಾಗಿಯೇ ಹಿಡಿದು ಕೂರಿಸುತ್ತೆ. ಲವ್ ಸ್ಟೋರಿ ಜೊತೆಗೆ ಪಂಚಿಂಗ್ ಕಾಮಿಡಿ ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ. ಮೊದಲ ಸಿನಿಮಾದಲ್ಲಿ ಮೇಘಾ ಶೆಟ್ಟಿ ಸಿನಿಪ್ರಿಯರ ಹೃದಯ ಗೆದ್ದಿದ್ದಾರೆ. ನಟಿ ಅದಿತಿ ಪ್ರಭುದೇವ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದ ಸೆಕೆಂಡ್ ಆಫ್ನಲ್ಲಿ ರಚನಾ ಇಂದರ್ ಬೋಲ್ಡ್ ಪಾತ್ರದಲ್ಲಿ ಮಿಂಚಿದ್ದಾರೆ.