ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ನಟನೆಯ (Nawazuddin Siddiqui) ಮುಂದಿನ ಬಹುನಿರೀಕ್ಷಿತ ಸಿನಿಮಾ ಹಡ್ಡಿ (Haddi). ತೃತೀಯಲಿಂಗಿಗಳ ಕುರಿತಾಣ ಚಿತ್ರವಿದು. ಸಾಕಷ್ಟು ತಯಾರಿ ನಡೆಸಿಕೊಂಡು ಅಖಾಡಕ್ಕೆ ಧುಮುಕಿದ್ದಾರೆ ನಟ ನವಾಜುದ್ದೀನ್ ಸಿದ್ದಿಕಿ. ಮತ್ತೊಂದು ಗಮನಾರ್ಹ ವಿಚಾರವೆಂದರೆ ಚಿತ್ರಕ್ಕೆ ನೈಜತೆ ತಂದುಕೊಡಲು ನಿರ್ಮಾಪಕರು 300 ನಿಜವಾದ ತೃತೀಯಲಿಂಗಿಗಳನ್ನು ಕರೆತಂದಿದ್ದಾರೆ.
ಸಂಜಯ್ ಸಹಾ ಮತ್ತು ರಾಧಿಕಾ ನಂದಾ (ಚೊಚ್ಚಲ ನಿರ್ಮಾಣ) ಈ ಹಡ್ಡಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕಾಗಿ 300 ಟ್ರಾನ್ಸ್ಜೆಂಡರ್ಗಳನ್ನು ಹುಡುಕುವ ಪ್ರಕ್ರಿಯೆಯನ್ನು ಚಿತ್ರರಂಗದವರು 'ಸಾಹಸ' ಎಂದು ಕರೆದಿದ್ದಾರೆ.
"ಈ ಪ್ರಕ್ರಿಯೆಯು ಅತ್ಯಂತ ಸಾಹಸಮಯ ಮತ್ತು ಕಠಿಣವಾಗಿತ್ತು. ನಾವು ಅವರ ಜೀವನದ ಅನುಭವಗಳ ಬಗ್ಗೆ ಅರಿತಿರುವುದರಿಂದ ಅವರನ್ನು ನಮ್ಮ ಚಲನಚಿತ್ರದ ಭಾಗವಾಗಿಸಲು ಅವರಿಗೆ ಮನವರಿಕೆ ಮಾಡಿಕೊಡುವುದು ತುಂಬಾ ಕಷ್ಟಕರವಾಗಿರಲಿಲ್ಲ. ನಾವು ಅವರಿಂದ ಬಹಳಷ್ಟನ್ನು ಕಲಿತಿದ್ದೇವೆ. ಅವರ ಜೀವನ ಮತ್ತು ಪ್ರಪಂಚವು ನಮ್ಮಿಂದ ಹೇಗೆ ಭಿನ್ನವಾಗಿದೆ ಎಂಬುದನ್ನು ಒಳಗೊಂಡಂತೆ ಅವರಿಂದ ಅನೇಕ ವಿಷಯಗಳನ್ನು ಕಲಿತುಕೊಂಡಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ. ರೇಣುಕಾ ಎಂಬ ಟ್ರಾನ್ಸ್ಜೆಂಡರ್ ಹಡ್ಡಿ ಚಿತ್ರದ ಸಂಶೋಧನೆಯ ಸಮಯದಲ್ಲಿ ಚಿತ್ರ ನಿರ್ಮಾಪಕರಿಗೆ ಸಹಾಯ ಮಾಡಿದರು.
ನಿರ್ಮಾಪಕ ಸಂಜಯ್ ಸಹಾ ಮಾತನಾಡಿ, "ಅವರು ಬಾಲ್ಯದಿಂದ ದೈನಂದಿನ ಜೀವನದಲ್ಲಿ ಅವರು ಎದುರಿಸಿದ ಸವಾಲುಗಳ ಜೊತೆಗೆ ಅವರ ಸಮುದಾಯ ಮತ್ತು ಅವರ ಆಚರಣೆಯ ಬಗ್ಗೆ ಕಲಿಯಲು ನಮಗೆ ಸಹಾಯ ಮಾಡಿದರು. ಅವರು ನಮಗೆ ಸ್ಕ್ರಿಪ್ಟ್ ಬರೆಯುವ ಸಮಯದಲ್ಲಿ ಸಹಾಯ ಮಾಡಿದರು. ಸಮುದಾಯದ ಅನೇಕ ಜನರನ್ನು ಭೇಟಿ ಮಾಡಲು ಸಹಾಯ ಮಾಡಿದರು. ಅವರ ಜೀವನದ ಬಗ್ಗೆ ಉತ್ತಮವಾಗಿ ಅರಿತುಕೊಂಡೆವು. ನಟ ನವಾಜುದ್ದೀನ್ ಸಿದ್ದಿಕಿ ಪಾತ್ರಕ್ಕೆ ಪ್ರವೇಶಿಸುವ ಸಂದರ್ಭ ಅವರ ಜೀವನವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಅವರ ಸಮುದಾಯದಿಂದ ಕೆರ ಸ್ನೇಹಿತರನ್ನು ಕರೆತಂದು ನಮಗೆ ಸಹಾಯ ಮಾಡಿದರೆಂದು ತಿಳಿಸಿದರು.