ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಲಿಯೋ' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಅಭಿಮಾನಿಗಳ ಕಾಯುವಿಕೆ ಅಂತ್ಯಗೊಳ್ಳುವ ಘಳಿಗೆ ಬಂದಿದೆ. ನಾಳೆ ಚಿತ್ರಮಂದಿರಗಳಲ್ಲಿ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದ್ದು, ಭರ್ಜರಿ ಸಿದ್ಧತೆ ನಡೆದಿದೆ.
ಥಿಯೇಟರ್‌ಗಳಲ್ಲಿ ಟ್ರೇಲರ್ ರಿಲೀಸ್ ಈವೆಂಟ್ ರದ್ದು: ಸಿನಿಮಾ ಬಿಡುಗಡೆ ಖುಷಿ ನಡುವೆ ಬೇಸರದ ಸಂಗತಿಯೂ ಇದೆ. ಲಿಯೋ ಟ್ರೇಲರ್ ಪ್ರದರ್ಶನದ ಸಂದರ್ಭದಲ್ಲಿ ದಳಪತಿ ವಿಜಯ್ ಅವರ ಅಭಿಮಾನಿಗಳು ಅಶಿಸ್ತಿನ ವರ್ತನೆ ತೋರಿದ ಹಿನ್ನೆಲೆ, ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಇನ್ಮುಂದೆ ಥಿಯೇಟರ್‌ಗಳಲ್ಲಿ ಟ್ರೇಲರ್ ರಿಲೀಸ್ ಈವೆಂಟ್ ಹಮ್ಮಿಕೊಳ್ಳುವುದಿಲ್ಲ.
ಮಾರ್ನಿಂಗ್ ಶೋ ಕೂಡ ನಿಷೇಧ:ವಿಜಯ್ ಅವರ ಕೆಲ ಅಭಿಮಾನಿಗಳು ಈ ತಿಂಗಳ ಆರಂಭದಲ್ಲಿ ಚೆನ್ನೈ ಥಿಯೇಟರ್‌ನ ಆಸನಗಳನ್ನು ಹಾನಿಗೊಳಿಸಿದ ನಂತರ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಸರ್ಕಾರ ಮಾರ್ನಿಂಗ್ ಶೋಗಳನ್ನೂ ಸಹ ನಿಷೇಧಿಸಿದೆ. ಲಿಯೋ ಸಿನಿಮಾ ನಾಳೆ ಅಂದರೆ ಅಕ್ಟೋಬರ್ 19 ರಂದು ಬೆಳಗ್ಗೆ 9 ಗಂಟೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಈ ಸಂಬಂಧ ಪೋಸ್ಟ್ ಶೇರ್ ಮಾಡಿದ್ದಾರೆ. ರೋಹಿಣಿ ಚಿತ್ರಮಂದಿರದಲ್ಲಿ ಹಾನಿಗೊಳಗಾದ ಸೀಟುಗಳ ಫೋಟೋ ಶೇರ್ ಮಾಡಿ, ಲಿಯೋ ಟ್ರೇಲರ್ ಬಿಡುಗಡೆ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಟ ವಿಜಯ್ ಅಭಿಮಾನಿಗಳು ಥಿಯೇಟರ್ಗೆ ಹಾನಿ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಥಿಯೇಟರ್ ಮಾಲೀಕರ ಸಂಘದ ಅಧ್ಯಕ್ಷರು ಇನ್ನು ಮುಂದೆ ಥಿಯೇಟರ್‌ಗಳಲ್ಲಿ ಟ್ರೇಲರ್‌ಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.