ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿಯನ್ನು ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ 'ದ ಎಲಿಫೆಂಟ್ ವಿಸ್ಪರರ್ಸ್' ಪಡೆದುಕೊಂಡಿದೆ. ಅನಾಥ ಆನೆಯನ್ನು ದತ್ತು ತೆಗೆದುಕೊಳ್ಳುವ ಕುಟುಂಬದ ಕಹಾನಿಯೇ ಸಾಕ್ಷ್ಯಚಿತ್ರದ ಕಥಾವಸ್ತು. ಈ ಡಾಕ್ಯುಮೆಂಟರಿ ಮೂಲಕ ಪ್ರಸಿದ್ಧವಾದ ಮರಿ ಆನೆಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ತಮಿಳುನಾಡಿನ ನೀಲಗಿರಿ ಪರ್ವತಗಳ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ಹಳೆಯದಾದ ತೆಪ್ಪಕಾಡು ಆನೆ ಶಿಬಿರಕ್ಕೆ ಆಗಮಿಸುತ್ತಿದ್ದಾರೆ.
ನೂರಾರು ಗಜ ಪ್ರೇಮಿಗಳು ಮುದುಮಲೈಗೆ ಭೇಟಿ ನೀಡುತ್ತಿದ್ದಾರೆ. ಕಿರು ಚಿತ್ರದಲ್ಲಿ ನೋಡಿದ ಮರಿ ಆನೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. "ಇದೊಂದು ಉತ್ತಮ ಕ್ಷಣ. ಇಲ್ಲಿಗೆ ಬಂದಿರುವುದು ನಿಜಕ್ಕೂ ಸಂತೋಷ ತಂದಿದೆ. ಆನೆ ನನ್ನ ನೆಚ್ಚಿನ ಪ್ರಾಣಿ ಮತ್ತು ಈ ಆನೆಯ ಡಾಕ್ಯುಮೆಂಟರಿ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದು ನನಗೆ ಖುಷಿಯನ್ನು ತಂದು ಕೊಟ್ಟಿದೆ" ಎಂದು ಪ್ರವಾಸಿಗರೊಬ್ಬರು ತಮ್ಮ ಹರ್ಷ ವ್ಯಕ್ತಪಡಿಸಿದರು.
ತಾಯಿನಾಡು ಭಾರತಕ್ಕೆ ಧನ್ಯವಾದ: ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿ ನಿನ್ನೆ ಮಾತನಾಡಿದ್ದ ಕಾರ್ತಿಕಿ ಗೊನ್ಸಾಲ್ವಿಸ್, "ನಮ್ಮ ಮತ್ತು ನೈಸರ್ಗಿಕ ಪ್ರಪಂಚದ ನಡುವಿನ ಪವಿತ್ರ ಬಾಂಧವ್ಯ ಹಾಗೂ ಸ್ಥಳೀಯ ಸಮುದಾಯಗಳ ಗೌರವಕ್ಕಾಗಿ ಮತ್ತು ಇತರೆ ಜೀವಿಗಳ ಕುರಿತು ಸಹಾನುಭೂತಿ, ಸಹಬಾಳ್ವೆಯ ಕುರಿತು ಮಾತನಾಡಲು ನಾನು ಇಂದು ಇಲ್ಲಿ ನಿಂತಿದ್ದೇನೆ. ನನ್ನ ಈ ಸಾಕ್ಷ್ಯಚಿತ್ರವನ್ನು ಗುರುತಿಸಿದಕ್ಕಾಗಿ ಧನ್ಯವಾದಗಳು ಅಕಾಡೆಮಿ. ಜೊತೆಗೆ ನನ್ನ ಇಡೀ ತಂಡಕ್ಕೆ ಮತ್ತು ತಾಯಿನಾಡು ಭಾರತಕ್ಕೆ ಕೃಜ್ಞತೆಗಳು" ಎಂದು ಹೇಳಿದ್ದರು.
ಈ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕಾಗಿ ಕಾರ್ತಿಕಿ ಗೊನ್ಸಾಲ್ವೆಸ್ ಅವರು ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ 5 ವರ್ಷಗಳ ಕಾಲ ತಂಗಿದ್ದರಂತೆ. ಈ ಕಿರುಚಿತ್ರ ಅನಾಥ ಆನೆ ರಘು ಮತ್ತು ಅದರ ಪಾಲಕರಾದ ಮಾವುತ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ನಡುವಿನ ಅಮೂಲ್ಯವಾದ ಬಾಂಧವ್ಯವನ್ನು ನಿರೂಪಿಸುತ್ತದೆ.