ಇಡೀ ಜಗತ್ತೇ ಒಂದು ಮನೆ, ನಾವೆಲ್ಲಾ ಒಂದೇ ಸೂರಿನಡಿ ಬದುಕುತ್ತಿರುವವರು ಎಂಬ ಭಾವೈಕ್ಯತೆಯ ಸಂದೇಶ ಸಾರುವ, ಸ್ಟ್ರಾಂಗ್ ಕಂಟೆಂಟ್ ಒಳಗೊಂಡಿದ್ದ ತೋತಾಪುರಿ ಸಿನಿಮಾ ಪ್ರೇಕ್ಷಕರಿಂದ, ವಿಮರ್ಶಕರಿಂದ ಮೆಚ್ಚುಗೆ ಪಡೆದು ಯಶಸ್ವಿಯಾಗಿತ್ತು. ಆಗಲೇ ತೋತಾಪುರಿ ಚಿತ್ರದ ಎರಡನೇ ಭಾಗವನ್ನು ನಿರ್ಮಾಣ ಮಾಡುತ್ತಿರುವುದಾಗಿ ನಿರ್ದೇಶಕ ವಿಜಯಪ್ರಸಾದ್ ಸೂಚನೆ ನೀಡಿದ್ದರು. ಅದರಂತೆ ಇದೀಗ ತೋತಾಪುರಿ ಭಾಗ 2 ಸಿನಿಮಾ ನಿರ್ಮಾಣ ಆಗಿದ್ದು, ಶೀಘ್ರದಲ್ಲೇ ತೆರೆ ಕಾಣಲು ಸಿದ್ಧವಾಗುತ್ತಿದೆ.
ತೋತಾಪುರಿ 2 ಫಸ್ಟ್ ಲುಕ್:ತೋತಾಪುರಿ ಮೊದಲ ಭಾಗದ ಅಂತ್ಯದಲ್ಲಿ ಕಾಣಿಸಿಕೊಂಡು ಒಂದು ಸ್ಪೆಷಲ್ ಲುಕ್ ನೀಡಿದ್ದ ನಟ ಡಾಲಿ ಧನಂಜಯ್ ಈ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರ ಪಾತ್ರ ಚಿತ್ರದಲ್ಲಿ ಬಹಳ ವಿಶೇಷವಾಗಿ ಮೂಡಿಬಂದಿದೆ. ಇದೀಗ ತೋತಾಪುರಿ 2 ಚಿತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಪೋಸ್ಟರ್ನಲ್ಲಿ ಡಾಲಿ, ನವರಸನಾಯಕ:ಸದ್ಯ ಅನಾವರಣಗೊಂಡಿರುವ ಈ ಪೋಸ್ಟರ್ನಲ್ಲಿ ನವರಸನಾಯಕ ಜಗ್ಗೇಶ್ ಹಾಗೂ ಡಾಲಿ ಧನಂಜಯ್ ಅವರ ಕ್ಯಾರೆಕ್ಟರ್ ಹೇಗಿರುತ್ತೆ ಅನ್ನೋದರ ಝಲಕ್ ಇದೆ. ಮೊದಲ ಭಾಗದಲ್ಲಿ ನವರಸನಾಯಕ ಜಗ್ಗೇಶ್, ನಟಿ ಅದಿತಿ ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ವಿಜಯ್ ಪ್ರಸಾದ್ ಅವರ ನಿರ್ದೇಶನದ ಈ ಚಿತ್ರವನ್ನು ಶಿವಲಿಂಗ ಖ್ಯಾತಿಯ ನಿರ್ಮಾಪಕ ಕೆ ಎ ಸುರೇಶ್ ಅವರು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದರು.
ತೋತಾಪುರಿ 2 ಮೊದಲ ಭಾಗಕ್ಕಿಂತ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಡಾಲಿ ಅಭಿಮಾನಿಗಳಿಗಂತೂ ಫುಲ್ ಮೀಲ್ಸ್ ಎನ್ನಬಹುದು. ಪೋಸ್ಟ್ ಪ್ರೊಡಕ್ಷನ್ ಹಂತದ ಸಣ್ಣಪುಟ್ಟ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ಫಸ್ಟ್ ಕಾಪಿ ಹೊರಬರಲಿದೆ. ನಂತರ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗುವುದು. ನಮ್ಮ ನಿರೀಕ್ಷೆಯಂತೆಯೇ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬರಲಿದೆ ಅಂತಾರೆ ಚಿತ್ರತಂಡದವರು.