ಬಾಹುಬಲಿ, ಪುಷ್ಪಾ ಮತ್ತು ಕೆಜಿಎಫ್ ಚಿತ್ರಗಳ ಭರ್ಜರಿ ಯಶಸ್ಸಿನ ನಂತರ ಸೌತ್ ಸಿನಿಮಾ ಇಂಡಸ್ಟ್ರಿಯು ಸಾಕಷ್ಟು ಸುದ್ದಿಯಲ್ಲಿದೆ. ಇದರ ಜೊತೆಗೆ ದಕ್ಷಿಣ ಭಾರತದ ನಟಿಯರು ನಟರಷ್ಟೇ ಫ್ಯಾನ್ ಫಾಲೋಯಿಂಗ್ನಿಂದ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಕೆಲವು ನಟಿಯರಿಗಂತೂ ಆಫರ್ಗಳ ಕೊರತೆಯೇ ಇಲ್ಲವಂತೆ. ಮೇಲಿಂದ ಮೇಲೆ ಹಿಟ್ ಸಿನಿಮಾದಲ್ಲಿ ನಟಿಸುತ್ತಿರುವ ಈ ಟಾಪ್ ನಟಿಯರು ಇದೀಗ ಬಾಲಿವುಡ್ನಲ್ಲಿಯೂ ಬೇಡಿಕೆ ಹೆಚ್ಚಿಸಿಕೊಂಡಿದ್ದಾರಂತೆ.
ಇವರ್ಯಾರು ಸಿನಿಮಾಗಳನ್ನು ಹುಡುಕಿಕೊಂಡು ಹೋಗುತ್ತಿಲ್ಲ ಬದಲಿಗೆ ಇವರನ್ನೇ ಹುಡುಕಿಕೊಂಡು ಸಾಕಷ್ಟು ಅವಕಾಶಗಳು ಹರಿದು ಬರುತ್ತಿವೆಯಂತೆ. ಅವರು ಸದ್ಯದಲ್ಲೇ ಬಾಲಿವುಡ್ಗೆ ಪ್ರವೇಶ ಸಹ ಪಡೆಯಲಿದ್ದಾರೆ. ಹಾಗಾದರೆ ಯಾರು ಆ ನಟಿಮಣಿಯರು ಗೊತ್ತಾ? ಇಲ್ಲಿದೆ ಅವರ ಫಿಲ್ಮಿ ಜಾತಕ.
ನಟಿ ನಯನತಾರಾ: ನಿರ್ದೇಶಕ ಅಟ್ಲೀ ಅವರ ಮುಂಬರುವ ಬಹುನಿರೀಕ್ಷಿತ ಆ್ಯಕ್ಷನ್-ಥ್ರಿಲ್ಲರ್ 'ಜವಾನ್' ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ಇವರು ಕಾಣಿಸಿಕೊಳ್ಳಿದ್ದಾರೆ. ನಯನತಾರಾ ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಬಾಲಿವುಡ್ಗೆ ಪ್ರವೇಶ ಮಾಡಲಿದ್ದಾರೆ. ಹಾಗಾಗಿ ಟಾಪ್ ಸೌತ್ ಸುಂದರಿಯರ ಪಟ್ಟಿಯಲ್ಲಿ ನಯನತಾರಾ ಸಖತ್ ಸೌಂಡ್ ಮಾಡುತ್ತಿದ್ದಾರೆ. ಅಟ್ಲೀ ಇದಕ್ಕೂ ಮುನ್ನ 'ಬಿಗಿಲ್' ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ 'ಜವಾನ್' ಚಿತ್ರದ ಚಿತ್ರೀಕರಣ ನಡೆದಿದೆ ಎನ್ನಲಾಗುತ್ತಿದೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಈ ಚಿತ್ರವು ಜೂನ್ 2, 2023 ರಂದು ಬಿಡುಗಡೆಯಾಗಲಿದೆಯಂತೆ.
ಸಮಂತಾ ರುತ್ ಪ್ರಭು: ಇವರನ್ನು ವಿವಿಧ ನಿರ್ಮಾಣ ಸಂಸ್ಥೆಗಳು ಸಂಪರ್ಕಿಸಿವೆ. ಆದರೆ, ಸಮಂತಾ ಮಾತ್ರ ಇನ್ನೂ ತಮ್ಮ ಮೊದಲ ಬಾಲಿವುಡ್ ಚಿತ್ರ ಯಾವುದೆಂದು ಖಚಿತಪಡಿಸಿಲ್ಲ. ಹಿಂದಿಯ ವೆಬ್ ಸಿರೀಸ್ 'ದಿ ಫ್ಯಾಮಿಲಿ ಮ್ಯಾನ್ 2' ನೊಂದಿಗೆ OTT ಪದಾರ್ಪಣೆ ಮಾಡಿದರು. ಈ ವೆಬ್ ಸಿರೀಸ್ನಲ್ಲಿನ ಅವರ ಅಭಿನಯವು ಸಾಕಷ್ಟು ಮೆಚ್ಚುಗೆ ಗಳಿಸಿತು. ಸದ್ಯ 'ಸಿಟಾಡೆಲ್' ಎಂಬ ಹಾಲಿವುಡ್ನ ವೆಬ್ ಸಿರೀಸ್ ಅನ್ನು ಹಿಂದಿಗೆ ರಿಮೇಕ್ ಮಾಡಲಾಗುತ್ತಿದ್ದು ಈ ವೆಬ್ ಸರಣಿಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ವರುಣ್ ಧವನ್ ನಾಯನ ನಟನಾಗಿ ನಟಿಸಲಿದ್ದಾರೆ. ಇದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆ ಆಗುತ್ತದೆ.
ರಾಶಿ ಖನ್ನಾ:ಮತ್ತೊಬ್ಬ ಸೌತ್ ನಟಿ ರಾಶಿ ಖನ್ನಾ ಬಾಲಿವುಡ್ಗೆ ಕಾಲಿಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇತ್ತೀಚೆಗೆ ಅಜಯ್ ದೇವಗನ್ ಅವರೊಂದಿಗೆ ಹಿಂದಿ ವೆಬ್ ಸಿರೀಸ್ 'ರುದ್ರ: ದಿ ಎಡ್ಜ್ ಆಫ್ ಡಾರ್ಕ್ನೆಸ್' ನಲ್ಲಿ ಕಾಣಿಸಿಕೊಂಡಿದ್ದರು. ಈ ಸರಣಿಯು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಯಿತು. ಈ ವೆಬ್ ಸಿರೀಸ್ನಲ್ಲಿನ ಅವರ ಅಭಿನಯವು ಸಾಕಷ್ಟು ಮೆಚ್ಚುಗೆಯನ್ನು ಗಳಿಸಿತು. ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ದಿಶಾ ಪಟಾನಿ ಅವರೊಂದಿಗೆ ಮುಂಬರುವ ಆ್ಯಕ್ಷನ್ ಹಿಂದಿ ಚಿತ್ರ 'ಯೋಧಾ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕರಣ್ ಜೋಹರ್ ನಿರ್ಮಾಣದ ಈ ಚಿತ್ರವು ನವೆಂಬರ್ 11, 2022 ರಂದು ಬಿಡುಗಡೆಯಾಗಲಿದೆ.
ರಶ್ಮಿಕಾ ಮಂದಣ್ಣ: ಕರ್ನಾಟಕದ ಕೊಡಗಿನ ಕುವರಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿ ಬೆಳೆಯುತ್ತಿರುವ ತಾರೆ. ಈಗಾಗಲೇ ಮೂರು ಬಾಲಿವುಡ್ ಚಿತ್ರಗಳಿಗೆ ಸಹಿ ಹಾಕಿದ್ದು, ಈಗಲೂ ಅವರನ್ನು ಸಾಕಷ್ಟು ಸಿನಿಮಾಗಳು ಹುಡುಕಿಕೊಂಡು ಬರುತ್ತಿವೆ. ಅಮಿತಾಬ್ ಬಚ್ಚನ್ ಜೊತೆ 'ಗುಡ್ ಬೈ', ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ 'ಮಿಷನ್ ಮಜ್ನು' ಮತ್ತು ರಣಬೀರ್ ಕಪೂರ್ ಜೊತೆಗೆ 'ಅನಿಮಲ್' ಸದ್ಯ ಅವರು ನಟಿಸುತ್ತಿರುವ ಬಾಲಿವುಡ್ ಚಿತ್ರಗಳಾಗಿವೆ. ಈಗಾಗಲೇ 'ಗುಡ್‌ಬೈ' ಮತ್ತು 'ಮಿಷನ್ ಮಜ್ನು' ಚಿತ್ರೀಕರಣ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿವೆ. ಬಳಿಕ ರಣಬೀರ್ ಕಪೂರ್ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ.