ಟೊಟೊಟೊ ದರ ಏರಿಕೆ ಗ್ರಾಹಕರಿಗೆ ಬಿಸಿ ಮುಟ್ಟಿಸುತ್ತಿದ್ದು, ಅನ್ನದಾತರ ಕೈ ಹಿಡಿದಿದೆ. ಮಳೆ ಅವಾಂತರ ಹಿನ್ನೆಲೆ ಮಾರುಕಟ್ಟೆಗೆ ಟೊಮೆಟೊ ಪೂರೈಕೆ ಪ್ರಮಾಣ ಕಡಿಮೆ ಆಗಿದೆ. ಈ ಹಿನ್ನೆಲೆ, ತರಕಾರಿಗೆ ಬಂಗಾರದ ಬೆಲೆ ಬಂದಿದ್ದು, ಟೊಮೆಟೊ ಸದ್ಯ 'ಕಿಚನ್ ಕ್ವೀನ್' ಆಗಿ ಬಿಟ್ಟಿದೆ.
ಟೊಮೆಟೊ ದರ ಏರಿಕೆ: ಗಗನಕ್ಕೇರಿರುವ ಟೊಮೆಟೊ ದರದ ಹೊಡೆತ ಕೇವಲ ಸಾಮಾನ್ಯ ಜನರಿಗೆ ಮಾತ್ರವಲ್ಲ, ಶ್ರೀಮಂತರಿಗೂ ಬಿದ್ದಿದೆ. ಇತ್ತೀಚೆಗಷ್ಟೇ ಮಂಗಳೂರು ಮೂಲದವರಾದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಟೊಮೆಟೊ ದರ ಏರಿಕೆ ಬಗ್ಗೆ ಮಾತನಾಡಿದ್ದರು. ಇದೀಗ ಕುಡ್ಲದ ಬ್ಯೂಟಿ ಶಿಲ್ಪಾ ಶೆಟ್ಟಿ ಕೂಡ ಟೊಮೆಟೊ ದರ ಏರಿಕೆ ಸಂಬಂಧ ಫನ್ನಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಜೊತೆಗೆ 30 ಮಿಲಿಯನ್ ಫಾಲೋವರ್ಸ್ ಸಂಪಾದಿಸಿರುವ ಕುರಿತು ಅಭಿಮಾನಿಗಳಿಗೆ ವಿಡಿಯೋ ಪೋಸ್ಟ್ ಮೂಲಕ ಶಿಲ್ಪಾ ಅವರು ಧನ್ಯವಾದ ಅರ್ಪಿಸಿದ್ದಾರೆ.
ಟೊಮೆಟೊ ಕುರಿತು ಫನ್ನಿ ವಿಡಿಯೋ: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ತಾರೆಯರ ಪೈಕಿ ಶಿಲ್ಪಾ ಶೆಟ್ಟಿ ಕೂಡ ಒಬ್ಬರು. ಫಿಟ್ನೆಸ್ ಐಕಾನ್ ಶಿಲ್ಪಾ ಶೆಟ್ಟಿ ಅಭಿಮಾನಿಗಳಿಗೆ ಪ್ರೇರಣೆಯಾಗುವಂತಹ ಯೋಗ, ಫಿಟ್ನೆಸ್ ಕುರಿತ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ, ತಮ್ಮ ಪ್ರವಾಸದ ಮತ್ತು ಫನ್ನಿ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಖುಷಿಗೆ ಕಾರಣರಾಗುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ 30 ಮಿಲಿಯನ್ ಫಾಲೋವರ್ಸ್ ಸಂಪಾದಿಸಿರುವ ನಟಿ ಈವರೆಗೆ 3,462 ಪೋಸ್ಟ್ಗಳನ್ನು ಶೇರ್ ಮಾಡಿದ್ದಾರೆ. ಇತ್ತೀಚೆಗೆ ಟೊಮೆಟೊ ಕುರಿತು ಫನ್ನಿ ವಿಡಿಯೋ ಶೇರ್ ಮಾಡಿದ್ದು, ಸಖತ್ ಸದ್ದು ಮಾಡುತ್ತಿದೆ.