ಹೈದರಾಬಾದ್:ಟಾಲಿವುಡ್ ಮತ್ತೊಬ್ಬ ಹಿರಿಯ ಕಲಾವಿದನನ್ನು ಕಳೆದುಕೊಂಡಿದೆ. ಯಮನ ಪಾತ್ರಗಳಲ್ಲಿ ಘರ್ಜಿಸುತ್ತಿದ್ದ ಕೈಕಲಾ ಸತ್ಯನಾರಾಯಣ ಅವರು ಮೊನ್ನೆಯಷ್ಟೇ ನಿಧನರಾಗಿದ್ದರು. ಈಗ ಜನಪ್ರಿಯ ನಟ ಚಲಪತಿ ರಾವ್ (78) ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
600ಕ್ಕೂ ಅಧಿಕ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಚಲಪತಿ ರಾವ್ ಅವರು ಹೈದರಾಬಾದ್ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಮೇ 8, 1944 ರಂದು ಕೃಷ್ಣಾ ಜಿಲ್ಲೆಯ ಬಲ್ಲಿಪರ್ರು ಗ್ರಾಮದಲ್ಲಿ ಚಲಪತಿ ರಾವ್ ಅವರು ಜನಿಸಿದ್ದರು. ಚಲಪತಿ ರಾವ್ ಅವರಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ಪುತ್ರ ರವಿಬಾಬು ನಿರ್ದೇಶಕ, ನಟ ಮತ್ತು ನಿರ್ಮಾಪಕರಾಗಿದ್ದಾರೆ.
ಚಲಪತಿ ರಾವ್ ಅವರು ನಟರಲ್ಲದೇ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. 1966 ರಲ್ಲಿ 'ಗೂಢಾಚಾರಿ 116' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು, ಕಲಿಯುಗ ಕೃಷ್ಣಡು, ಕಡಪಾ ರೆಡ್ಡಮ್ಮ, ಜಗನ್ನಾಟಕಂ, ಪೆಳ್ಳಂಟೆ ನೂರೇಳ್ಳ ಪಂಟ, ರಾಷ್ಟ್ರಪತಿಗಾಗಿ ಅಲ್ಲುಡು ಸಿನಿಮಾಗಳನ್ನು ನಿರ್ಮಿಸಿದ್ದರು.