ಟಾಲಿವುಡ್ ಚಿತ್ರರಂಗದ ಯಂಗ್ ಹೀರೋ ನಿಖಿಲ್ ಸಿದ್ದಾರ್ಥ್ ನಟನೆಯ 'ಸ್ಪೈ' ನಿನ್ನೆಯಷ್ಟೇ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವಿನ ರಹಸ್ಯ ಕಥಾಹಂದರ ಹೊಂದಿರುವ ಈ ಚಿತ್ರ ಮೊದಲ ದಿನ ತಕ್ಕಮಟ್ಟಿಗೆ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ 11.7 ಕೋಟಿ ರೂಪಾಯಿ ಗಳಿಸಿದೆ.
ಇದು ಹೇಳಿಕೊಳ್ಳುವಷ್ಟು ಹಿಟ್ ಕಲೆಕ್ಷನ್ ಅಲ್ಲದೇ ಹೋದರೂ, ನಿಖಿಲ್ ವೃತ್ತಿ ಜೀವನದಲ್ಲಿ, ಮೊದಲ ದಿನವೇ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಇದಾಗಿದೆ. ಏಕಾದಶಿ ಮತ್ತು ಬಕ್ರೀದ್ ಹಬ್ಬದಂದೇ ಸಿನಿಮಾ ಬಿಡುಗಡೆಯಾದ್ದರಿಂದ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಆದರೆ ಚಿತ್ರದ ಬಗ್ಗೆ ನೆಗೆಟಿವ್ ಟಾಕ್ ಕೂಡ ಕೇಳಿಬರುತ್ತಿದೆ. 2022ರಲ್ಲಿ ತೆರೆಕಂಡ 'ಕಾರ್ತಿಕೇಯ 2' ಬಳಿಕ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ಆ್ಯಕ್ಷನ್ ಪ್ಯಾಕ್ಡ್ ಕಥಾಹಂದರವುಳ್ಳ ಚಿತ್ರವಿದು.
ಟ್ವಿಟರ್ ವಿಮರ್ಶೆ:ಸ್ಪೈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾದ ಸ್ಟೋರಿ ಲೈನ್ ಚೆನ್ನಾಗಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ಇಲ್ಲಿಯವರೆಗೆ ತೆರೆ ಕಾಣದ ವಿಭಿನ್ನ ವಿಷಯವನ್ನು ನಿರ್ದೇಶಕರು ಚಿತ್ರೀಕರಿಸಿರುವ ರೀತಿ ಚೆನ್ನಾಗಿದೆ ಎಂಬ ಪ್ರಶಂಸೆ ವ್ಯಕ್ತವಾಗುತ್ತಿದೆ. ನೇತಾಜಿ ಅವರ ಸುತ್ತ ನಡೆಯುವ ಕಥೆ ಕುತೂಹಲಕರವಾಗಿದ್ದು, ಕಾಲಕಾಲಕ್ಕೆ ಪ್ರೇಕ್ಷಕರಲ್ಲಿ ಸಸ್ಪೆನ್ಸ್ ಹೆಚ್ಚಿಸುತ್ತಿದೆ. ಆದರೆ ಅವರಿಗೆ ತಕ್ಕಂತೆ ಸಾಹಸ ದೃಶ್ಯಗಳ ಗುಣಮಟ್ಟ ಹೆಚ್ಚಿಸಿದ್ದರೆ ಚೆನ್ನಾಗಿತ್ತು ಎಂಬುದು ಕೆಲವರ ಅಭಿಪ್ರಾಯ.
ರಾ ಏಜೆಂಟ್ ಆಗಿ ನಿಖಿಲ್ ಅವರ ಆ್ಯಕ್ಷನ್ ಅದ್ಭುತವಾಗಿದೆ. ಜೊತೆಗೆ ಸಾಹಸ ದೃಶ್ಯಗಳೂ ಚೆನ್ನಾಗಿವೆ. ಸಿನಿಮಾಟೋಗ್ರಫಿ ಹಾಗೂ ನಿರ್ದೇಶನದ ಬಗ್ಗೆಯೂ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ನಿಖಿಲ್ ಪಾತ್ರದ ಪ್ರಾಮುಖ್ಯತೆಯಿಂದಾಗಿ ಉಳಿದ ನಟರಿಗೆ ಹೆಚ್ಚಿನ ಸ್ಕೋಪ್ ಇಲ್ಲ ಎನ್ನಲಾಗಿದೆ. ಇನ್ನೊಂದೆಡೆ ಸಂಗೀತವೂ ಈ ಸಿನಿಮಾಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಅದರಲ್ಲೂ ಹಿನ್ನೆಲೆ ಸಂಗೀತ ಸಿನಿಮಾದ ಹೈಲೈಟ್ ಅಂತಲೇ ಹೇಳಬಹುದು.