ಹೈದರಾಬಾದ್(ತೆಲಂಗಾಣ): ತೆಲುಗು ಚಿತ್ರರಂಗ ಅಮೂಲ್ಯ ರತ್ನವೊಂದನ್ನು ಕಳೆದುಕೊಂಡಿದೆ. ಟಾಲಿವುಡ್ನಲ್ಲಿ ತಂತ್ರಜ್ಞಾನದ ಮೂಲಕ ಅದ್ಭುತ ಸೃಷ್ಟಿಸಿದ ಟಾಲಿವುಡ್ ಜೇಮ್ಸ್ ಬಾಂಡ್, ಸೂಪರ್ ಸ್ಟಾರ್ ಕೃಷ್ಣ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ. ಪ್ರತಿಷ್ಟಿತ ಘಟ್ಟಮನೇನಿ ಕುಟುಂಬದಲ್ಲೀಗ ಶೋಕ ಮಡುಗಟ್ಟಿದೆ. ಹಿರಿಯ ನಟನ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
ಕೃಷ್ಣ ಅವರ ಜೀವನಗಾಥೆ:ಕೃಷ್ಣ ಅವರ ನಿಜವಾದ ಹೆಸರು ಘಟ್ಟಮನೇನಿ ಶಿವರಾಮ ಕೃಷ್ಣಮೂರ್ತಿ. ಬಾಲ್ಯದಿಂದಲೂ ಇವರಿಗೆ ಸಿನಿಮಾಗಳ ಮೇಲೆ ಅಪಾರ ಆಸಕ್ತಿ. ಆದರೆ ತಂದೆ-ತಾಯಿಗೆ ಪುತ್ರ ಇಂಜಿನಿಯರ್ ಆಗಬೇಕೆಂಬ ಆಸೆ ಇತ್ತು. ಆದರೆ, ಇಂಜಿನಿಯರಿಂಗ್ ಓದಲು ಸೀಟು ಸಿಗದ ಕಾರಣ ಪದವಿ ವಿದ್ಯಾಭ್ಯಾಸಕ್ಕೆ ಸೇರಿಕೊಂಡರು. ಅಲ್ಲಿ ಓದುತ್ತಿದ್ದಾಗ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರರಾವ್ ಅವರನ್ನು ಏಲೂರಿನಲ್ಲಿ ಸನ್ಮಾನಿಸುವ ಕಾರ್ಯಕ್ರಮವೊಂದು ಜರುಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಕೃಷ್ಣ ಅವರಿಗೆ ಸಿನಿಮಾ ಪ್ರೀತಿ ಮತ್ತಷ್ಟು ಹೆಚ್ಚಿದೆ. ಬಳಿಕ ಈ ಕ್ಷೇತ್ರದತ್ತ ಅವರು ಅಪಾರ ಒಲವು ತೋರಿಸಿದರು. ಕೃಷ್ಣ 1965 ರಲ್ಲಿ ಇಂದಿರಾ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ರಮೇಶ್ ಬಾಬು, ಮಹೇಶ್ ಬಾಬು, ಪದ್ಮಾವತಿ, ಪ್ರಿಯದರ್ಶಿನಿ ಹಾಗು ಮಂಜುಳಾ ಎಂಬ ಐವರು ಮಕ್ಕಳಿದ್ದಾರೆ. ಆ ನಂತರದಲ್ಲಿ ಕೃಷ್ಣ ಎರಡನೇ ಬಾರಿಗೆ ಸಿನಿಮಾ ನಟಿ ಹಾಗೂ ನಿರ್ದೇಶಕಿ ವಿಜಯ ನಿರ್ಮಲ್ ಅವರನ್ನು ವಿವಾಹವಾದರು.
ಸಿನಿ ಜೀವನಯಾತ್ರೆ ಪ್ರಾರಂಭ: ಪದವಿ ಮುಗಿದರೂ ಇಂಜಿನಿಯರಿಂಗ್ ಸೀಟು ಪಡೆಯಲು ಯತ್ನಿಸಿದ ಕೃಷ್ಣ, ಅದು ಸಿಗದ ಕಾರಣಕ್ಕೆ ಸಿನಿಮಾವನ್ನೇ ಭವಿಷ್ಯವಾಗಿ ಆಯ್ದುಕೊಂಡರು. ನಟರಾದ ಜಗ್ಗಯ್ಯ, ಗುಮ್ಮಡಿ ಮತ್ತು ನಿರ್ಮಾಪಕ ಚಕ್ರಪಾಣಿ ಅವರು ತೆನಾಲಿಯವರಾಗಿದ್ದು, ಕೃಷ್ಣ ಮದ್ರಾಸಿಗೆ ಹೋಗಿ ಅವರನ್ನು ಭೇಟಿಯಾದರು. ಆಗ ಕೃಷ್ಣ ಚಿರಯುವಕ. ಹೀಗಾಗಿ ಕೆಲ ವರ್ಷಗಳ ಬಳಿಕ ಮದ್ರಾಸಿಗೆ ಬಂದರೆ ಚಿತ್ರಗಳಲ್ಲಿ ಒಳ್ಳೆಯ ಅವಕಾಶಗಳು ಬರುತ್ತವೆ ಎಂದು ಸಲಹೆ ನೀಡಿದರು. ಹಿಂದಿರುಗಿದ ಕೃಷ್ಣ ಪ್ರಜಾನಾಟ್ಯ ಮಂಡಳಿಗೆ ಸೇರಿ ಗರಿಕಪಾಟಿ ರಾಜಾರಾವ್ ಅವರ ಸಹಕಾರದಿಂದ ಹಲವಾರು ನಾಟಕಗಳಲ್ಲಿ ನಟಿಸಿ ನಟನಾ ಜ್ಞಾನ ಹೆಚ್ಚಿಸಿಕೊಂಡರು.
1964ರಲ್ಲಿ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಆದುರ್ತಿ ಸುಬ್ಬರಾವ್ ನಿರ್ದೇಶನದ ‘ತೆನೆ ಮನಸುಲು’ ಚಿತ್ರದ ಮೂಲಕ ಕೃಷ್ಣ ಅವರ ಸಿನಿಮಾ ಜೀವನ ಆರಂಭವಾಯಿತು. ಈ ಚಿತ್ರದಲ್ಲಿ ಅವರ ಅಭಿನಯ ಅಷ್ಟೇನೂ ಚೆನ್ನಾಗಿಲ್ಲದ ಕಾರಣ ಅವರನ್ನು ತೆಗೆಯುವಂತೆ ನಿರ್ದೇಶಕರ ಮೇಲೆ ಒತ್ತಡ ಹೇರಲಾಗಿತ್ತು. ಆದರೂ ಆದುರ್ತಿ ಸುಬ್ಬರಾವ್ ತಮ್ಮ ನಿರ್ಧಾರ ಬದಲಿಸಲಿಲ್ಲ. 1965 ರಲ್ಲಿ ಬಿಡುಗಡೆಯಾದ ಅವರ ಚಿತ್ರ ದೊಡ್ಡ ಯಶಸ್ಸು ಕಂಡಿತು.
20 ಸಿನಿಮಾಗಳಲ್ಲಿ ಅವಕಾಶ:'ಕಣ್ಣೆ ಮನಸೆಲ್ಲೋ' ಚಿತ್ರದಲ್ಲಿ ನಟಿಸುತ್ತಿರುವಾಗಲೇ 'ಗೂಢಚಾರಿ 116' ಸಿನಿಮಾದಲ್ಲಿ ನಟಿಸುವ ಅವಕಾಶ ಕೃಷ್ಣ ಅವರಿಗೆ ಒಲಿದುಬಂತು. ಈ ಚಿತ್ರ ಕೂಡಾ ದೊಡ್ಡ ಯಶಸ್ಸು ಗಳಿಸಿತು. ಅಲ್ಲಿಂದ ಇವರ ಜೀವನದ ವೃತ್ತಿ ಪ್ರಯಾಣ ಬದಲಾಯಿತು. ತೆಲುಗು ಪ್ರೇಕ್ಷಕರು ಅವರನ್ನು ಪ್ರೀತಿಯಿಂದ ಆಂಧ್ರದ ಜೇಮ್ಸ್ ಬಾಂಡ್ ಎಂದೇ ಕರೆಯುತ್ತಿದ್ದರು. ಈ ಯಶಸ್ಸಿನೊಂದಿಗೆ ಕೃಷ್ಣ 20 ಚಿತ್ರಗಳ ನಾಯಕನಾಗಿ ಆಯ್ಕೆಯಾದರು. ಗೂಢಚಾರಿ 116 ಚಿತ್ರದೊಂದಿಗೆ ಅವರ ಇಮೇಜ್ ಅಗಾಧವಾಗಿ ಬೆಳೆಯಿತು. ಅದರ ನಂತರ, ಅವರು ಮುಂದಿನ ಎರಡು ದಶಕಗಳಲ್ಲಿ 6 ಜೇಮ್ಸ್ ಬಾಂಡ್ ಚಿತ್ರಗಳನ್ನು ಮಾಡಿದರು. ಆ ಚಿತ್ರಗಳೆಲ್ಲವೂ ಯಶಸ್ಸು ಕಂಡವು. ಬಾಪು ಅವರ ಸಂಪೂರ್ಣ ಹೊರಾಂಗಣ ಚಿತ್ರ ‘ಸಾಕ್ಷಿ’ ಕೃಷ್ಣ ಅವರ ಇಮೇಜ್ ಇನ್ನೂ ಹೆಚ್ಚಿಸಿತು. ಮಾನವೀಯತೆಯಲ್ಲಿ ನಂಬಿಕೆಯಿರುವ ಹಳ್ಳಿಯ ಮುಗ್ದನ ಪಾತ್ರದಲ್ಲಿ ಅವರು ನಟಿಸಿರುವ ಚಿತ್ರವಿದು. ಇದು ವಿಜಯನಿರ್ಮಲ್ ಜೊತೆಗಿನ ಮೊದಲ ಚಿತ್ರವೂ ಹೌದು.