ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೇವಲ ನಟನಾಗಿ ಮಾತ್ರವಲ್ಲದೇ, ನಿರ್ಮಾಪಕನಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ತಮ್ಮದೇ ಪರಂವಃ ಸ್ಟುಡಿಯೋಸ್ ಮೂಲಕ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ', 'ಬ್ಯಾಚುರಲ್ ಪಾರ್ಟಿ' ಸಿನಿಮಾಗಳನ್ನು ಇವರೇ ನಿರ್ಮಿಸಿದ್ದಾರೆ. ಇದೀಗ 'ಇಬ್ಬನಿ ತಬ್ಬಿದ ಇಳೆಯಲಿ' ಎಂಬ ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ.
ಈ ಹಿಂದೆ ರಕ್ಷಿತ್ ಶೆಟ್ಟಿ ಅವರ ಸವೆನ್ ಆಡ್ಸ್ ಚಿತ್ರಕಥಾ ವಿಭಾಗದಲ್ಲಿ, 'ಕಿರಿಕ್ ಪಾರ್ಟಿ' ಮತ್ತು 'ಅವನೇ ಶ್ರೀಮನ್ನಾರಾಯಣ' ಚಿತ್ರಗಳ ಚಿತ್ರಕಥೆಯಲ್ಲಿ ತೊಡಗಿಸಿಕೊಂಡಿದ್ದ ಮತ್ತು 'ರೇನ್ಬೋ ಲ್ಯಾಂಡ್' ಕಿರುಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಜಿತ್ ಬೆಳ್ಳಿಯಪ್ಪ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಇವರ ಸುಮಧುರ ಪ್ರೇಮಕಾವ್ಯದಲ್ಲಿ ಖ್ಯಾತ ನಟಿ ಗಿರಿಜಾ ಶೆಟ್ಟರ್ ಅಭಿನಯಿಸಿದ್ದಾರೆ.
ತೆಲುಗಿನ 'ಗೀತಾಂಜಲಿ' ಚಿತ್ರ ಸೇರಿದಂತೆ ಅನೇಕ ಸುಪ್ರಸಿದ್ದ ಚಿತ್ರಗಳಲ್ಲಿ ನಟಿಸಿರುವ ಗಿರಿಜಾ ಶೆಟ್ಟರ್, ಈ ಚಿತ್ರದಲ್ಲೂ ನಟಿಸಿದ್ದಾರೆ. ಗಿರಿಜಾ ಶೆಟ್ಟರ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅವರಿಗೆ ಸ್ವಾಗತ ಕೋರಿದೆ. 30 ವರ್ಷಗಳ ಬಳಿಕ ಗಿರಿಜಾ ಶೆಟ್ಟರ್ ಮತ್ತೆ ಬಣ್ಣ ಹಚ್ಚಿದ್ದಾರೆ.
ಚಂದ್ರಜಿತ್ ಬೆಳ್ಳಿಯಪ್ಪ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ಶೂಟಿಂಗ್ ಮುಕ್ತಾಯ ಹಂತ ತಲುಪಿದ್ದು, ಚಿತ್ರತಂಡಕ್ಕೆ ಗಿರಿಜಾ ಶೆಟ್ಟರ್ ಸೇರ್ಪಡೆಯಾಗಿದ್ದಾರೆ. ಇದರಲ್ಲಿ ನಟಿಗೆ ಪ್ರಮುಖ ಪಾತ್ರವಿದ್ದು, ಅವರು ಚಿತ್ರೀಕರಣದಲ್ಲಿ ಈಗಾಗಲೇ ಭಾಗವಹಿಸಿದ್ದಾರೆ.