ಪ್ರಸ್ತುತ ದಿನಗಳಲ್ಲಿ ಜನರು ಸೋಷಿಯಲ್ ಮೀಡಿಯಾಗಳಿಗೆ ಹೆಚ್ಚು ಒಗ್ಗಿಕೊಂಡಿದ್ದಾರೆ. ಹೀಗಾಗಿ ಸೆಲೆಬ್ರಿಟಿಗಳು ಕೂಡ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕವೇ ಸನಿಹವಾಗುತ್ತಿದ್ದಾರೆ. ತಮ್ಮ ಹೊಸ ಸಿನಿಮಾ ಅಪ್ಡೇಟ್ಸ್, ಫೋಟೋಸ್, ವೈಯಕ್ತಿಕ ವಿಚಾರಗಳು ಎಲ್ಲವನ್ನೂ ಈ ವೇದಿಕೆಯಲ್ಲಿಯೇ ಹಂಚಿಕೊಳ್ಳುತ್ತಾರೆ. ಆದರೆ, ಇಲ್ಲಿಯವರೆಗೆ ಫೇಸ್ಬುಕ್, ಇನ್ಸ್ಟಾಗ್ರಾಮ್, ಎಕ್ಸ್ (ಹಿಂದಿನ ಟ್ವಿಟರ್) ಮಾತ್ರ ಇತ್ತು. ಇದೀಗ ಸೆಲೆಬ್ರಿಟಿಗಳು ಯೂಟ್ಯೂಬ್ಗೂ ಎಂಟ್ರಿಯಾಗುತ್ತಿದ್ದಾರೆ.
ಹೌದು, ತಮ್ಮದೇ ಯೂಟ್ಯೂಬ್ ಚಾನೆಲ್ಗಳನ್ನು ಶುರು ಮಾಡಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಅವರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಇದೀಗ ಈ ಸಾಲಿಗೆ ಟಾಲಿವುಡ್ ಯುವ ಸಾಮ್ರಾಟ್ ಅಕ್ಕಿನೇನಿ ನಾಗ ಚೈತನ್ಯ ಕೂಡ ಸೇರಿಕೊಂಡಿದ್ದಾರೆ. ತಮ್ಮ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದಾರೆ. ಈ ವಿಚಾರವನ್ನು ಅವರೇ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಯೂಟ್ಯೂಬ್ನಲ್ಲಿ ಮೊದಲ ವಿಡಿಯೋ ಹಂಚಿಕೊಂಡಿರುವ ಅವರು, ನೆಟ್ಟಿಗರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. 'ಬಹಳ ಸಮಯದ ನಂತರ ಕೂದಲು ಗಡ್ಡ ಬಿಟ್ಟಿದ್ದೀರಿ. ಕಾರಣವೇನು?' ಎಂದು ಕೇಳಿದಾಗ, 'ಮಾಡಲು ಕೆಲಸವೇನು ಇಲ್ಲ, ಹಾಗಾಗಿ ಗಡ್ಡ ಬಿಟ್ಟೆ 'ಎಂದು ತಮಾಷೆ ಮಾಡಿದ್ದಾರೆ. ಬಳಿಕ ನಿರ್ದೇಶಕ ಚಂದು ಮೊಂಡೇಟಿ ಜೊತೆಗಿನ NC23 (ತಾತ್ಕಾಲಿಕ ಶೀರ್ಷಿಕೆ) ಚಿತ್ರಕ್ಕಾಗಿಯೇ ಗಡ್ಡ ಮತ್ತು ಕೂದಲು ಬಿಟ್ಟಿರುವುದಾಗಿ ಸ್ಪಷ್ಟನೆ ನೀಡಿದರು.