ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಪೋಸ್ಟರ್ ಹಾಗೂ ಟೈಟಲ್ನಿಂದಲೇ ಕ್ರೇಜ್ ಹುಟ್ಟಿಸಿದ ಸಿನಿಮಾ 'ಟೋಬಿ'. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಮತ್ತು ನಿರ್ದೇಶಕ ರಾಜ್.ಬಿ ಶೆಟ್ಟಿ ಅಭಿನಯದ 'ಟೋಬಿ' ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿದೆ. ಈ ವರ್ಷ ತೆರೆ ಕಂಡ ಅನೇಕ ಸಿನಿಮಾಗಳಲ್ಲಿ ವೀಕ್ಷಕರಿಂದ ಮೆಚ್ಚುಗೆ ಪಡೆದ ಚಿತ್ರಗಳಲ್ಲಿ ಇದು ಕೂಡ ಒಂದು.
ಮೊದಲು ಕನ್ನಡದಲ್ಲಿ ತೆರೆ ಕಂಡು ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆಗೆ ಪಾತ್ರವಾದ 'ಟೋಬಿ' ಭಾಷೆಯ ಎಲ್ಲೆ ಮೀರಿ ದೇಶಾದ್ಯಂತ ಮೆಚ್ಚುಗೆ ಪಡೆದಿತ್ತು. ಇದೀಗ ಥಿಯೇಟರ್ನಲ್ಲಿ ಗೆದ್ದ ಟೋಬಿಯು ಒಟಿಟಿಗೆ ಬರಲು ಡೇಟ್ ಫಿಕ್ಸ್ ಆಗಿದೆ. ಡಿಸೆಂಬರ್ 22ರಿಂದ ಓಟಿಟಿ ಪ್ಲಾಟ್ಫಾರ್ಮ್ ಸೋನಿಲಿವ್ (SonyLIV)ನಲ್ಲಿ ಲಭ್ಯವಾಗಲಿದೆ.
ಚಿತ್ರಕಥೆ: ಹರಕೆಯ ಕುರಿ ಕಾಣೆಯಾಗಿದೆ ಎಂಬುದರಿಂದ 'ಟೋಬಿ' ಚಿತ್ರ ಶುರುವಾಗುತ್ತದೆ. ಹೀಗೆ ಕಾಣೆಯಾದ ಆ ಕುರಿ ವಾಪಸ್ ಬಂದರೆ ಮಾರಿಯಾಗಿರುತ್ತದೆ ಎಂಬುದು ಪೂಜಾರಿ ಹೇಳುವ ಮಾತು. ಅಂದರೆ ಇಲ್ಲಿ ಹರಕೆಯ ಕುರಿ ಯಾರು? ಮೂಗುತಿ ಮಾರಿಯಾಗಲು ಕಾರಣವೇನು? ಎಂಬುದೇ ಸಿನಿಮಾ ಕಥೆ. ಹೆಸರಿಲ್ಲದ ಅನಾಥ, ಮೂಕ ವಿಲಕ್ಷಣ ವ್ಯಕ್ತಿಯೊಬ್ಬ ಮತ್ತೊಂದು ಅನಾಥ ಹೆಣ್ಣು ಮಗುವನ್ನು ಸಾಕುವ, ಮನೆ ಕಟ್ಟಲು, ಜೀವನ ಸಾಗಿಸಲು ಉಳ್ಳವರಿಗೆ ಹರಕೆಯ ಕುರಿಯಾಗುವ ಆತನ ಜೀವನದಲ್ಲಿ ನಡೆಯುವ ಘಟನೆಗಳೇ 'ಟೋಬಿ' ಕಥೆಯ ತಿರುಳು.
ಡಿಸೆಂಬರ್ 22ರಿಂದ ರಾಜ್.ಬಿ ಶೆಟ್ಟಿಯ 'ಟೋಬಿ' ಸಿನಿಮಾ ಒಟಿಟಿಯಲ್ಲಿ ಲಭ್ಯ! ಸಿನಿಮಾದಲ್ಲಿ 'ಟೋಬಿ'ಯಾಗಿ ನಟ ರಾಜ್.ಬಿ ಶೆಟ್ಟಿ ಅಬ್ಬರಿಸುವ ಮೂಲಕ ಸಿನಿ ಪ್ರೇಮಿಗಳ ಮನಸ್ಸು ಕದ್ದಿದ್ದಾರೆ. ಟೋಬಿಯ ಮಗಳಾಗಿ ಚೈತ್ರಾ ಆಚಾರ್ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಶವಾಗಾರದಲ್ಲಿ ಕೆಲಸ ಮಾಡುವವನ ಪಾತ್ರದಲ್ಲಿ ಗೋಪಾಲ್ ದೇಶಪಾಂಡೆ ಗಮನ ಸೆಳೆಯುತ್ತಾರೆ. ಖಳನಟನಾಗಿ ರಾಜ್ ದೀಪಕ್ ಶೆಟ್ಟಿ ನಟನೆ ತುಂಬಾ ಚೆನ್ನಾಗಿದೆ. ಸಂಯುಕ್ತಾ ಹೊರನಾಡು ಚಿತ್ರದಲ್ಲಿ ಕಣ್ಣಲ್ಲೇ ಮಾತನಾಡುತ್ತಾರೆ.
ಇಷ್ಟೆಲ್ಲ ಹೈಲೆಟ್ಸ್ ಇರುವ 'ಟೋಬಿ' ಸಿನಿಮಾ ಡಿಸೆಂಬರ್ 22ರಿಂದ SonyLIV ಒಟಿಟಿ ಆ್ಯಪ್ನಲ್ಲಿ ಪ್ರಸಾರವಾಗಲಿದೆ. ಈ ಹಿಂದೆ ಪುನೀತ್ ರಾಜ್ಕುಮಾರ್ ನಟಿಸಿದ ಕೊನೆಯ ಚಿತ್ರ 'ಜೇಮ್ಸ್' ನ ನಂತರ ಸೋನಿ ಸಂಸ್ಥೆಯಲ್ಲಿ ಬಿಡುಗಡೆಗೊಳ್ಳಲಿರುವ ಎರಡನೇ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯೂ 'ಟೋಬಿ'ಗೆ ಸಿಕ್ಕಿದೆ.
ರಾಜ್.ಬಿ ಶೆಟ್ಟಿ ಬರೆದು ನಟಿಸಿರುವ ಚಿತ್ರಕ್ಕೆ ಬಾಸಿಲ್ ನಿರ್ದೇಶನವಿದೆ. ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಮತ್ತು ಮಿಥುನ್ ಮುಕುಂದನ್ ಸಂಗೀತವಿದೆ. ಚಿತ್ರವನ್ನು ಲೈಟರ್ ಬುದ್ಧ ಫಿಲ್ಮ್ಸ್, ಅಗಸ್ತ್ಯ ಫಿಲ್ಮ್ಸ್, ಕಾಫಿ ಗ್ಯಾಂಗ್ ಸ್ಟುಡಿಯೋಸ್ ಮತ್ತು ಸ್ಮೂತ್ ಸೈಲರ್ಸ್ ಜಂಟಿಯಾಗಿ ನಿರ್ಮಿಸಿದೆ. ಚಿತ್ರಮಂದಿರಗಳಲ್ಲಿ ನೋಡಲು ಮಿಸ್ ಮಾಡಿಕೊಂಡವರು, ಮತ್ತೊಮ್ಮೆ ಈ ಸಿನಿಮಾವನ್ನು ನೋಡಲು ಬಯಸುವವರಿಗೆ ಚಿತ್ರವು ಇನ್ನೇನು ಮೂರು ದಿನಗಳಲ್ಲಿ ಸಿಗಲಿದೆ.
ಇದನ್ನೂ ಓದಿ:'ಮಾರಿಗೆ ದಾರಿ ಬಿಡಿ'.. ಬಂದೇಬಿಡ್ತು 'ಟೋಬಿ': ರಾಜ್ಯಾದ್ಯಂತ ಶೆಟ್ರ ಹವಾ