ಮಹಿಳೆಯರು ನಿತ್ಯ ಧರಿಸುವ ಸೀರೆ, ಓಲೆ, ಬಳೆ ಹಾಗು ಗೆಜ್ಜೆ ಸೇರಿದಂತೆ ಹಲವು ವಸ್ತುಗಳ ಬಗ್ಗೆ ಸಾಕಷ್ಟು ಹಾಡುಗಳು ಬಂದಿವೆ. ಆದರೆ ರವಿಕೆ ಬಗ್ಗೆ ಈವರೆಗೂ ಯಾವುದೇ ಹಾಡು, ಸಿನಿಮಾ ಮೂಡಿಬಂದಿಲ್ಲ. ಇದೀಗ ರವಿಕೆ ಕುರಿತಾಗಿಯೇ ಸಿನಿಮಾ ನಿರ್ಮಾಣವಾಗುತ್ತಿದ್ದು ಅದರ ಹೆಸರು 'ರವಿಕೆ ಪ್ರಸಂಗ'. ಕಿರುತೆರೆ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನಗೆದ್ದಿರುವ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಗೀತಾ ಭಾರತಿ ಈ ಚಿತ್ರದ ಮೂಲಕ ಹೀರೋಯಿನ್ ಆಗಿ ಹೊರಹೊಮ್ಮುತ್ತಿದ್ದಾರೆ. ಶೀರ್ಷಿಕೆಯಿಂದಾಗಿ ಕುತೂಹಲ ಹುಟ್ಟಿಸಿರೋ 'ರವಿಕೆ ಪ್ರಸಂಗ' ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.
ಸದ್ಯ ರವಿಕೆ ಪ್ರಸಂಗ ಚಿತ್ರದ ಟೈಟಲ್ ಸಾಂಗ್ ಅನಾವರಣಗೊಂಡಿದೆ. ಈ ಹಾಡಿನಲ್ಲಿ ಬ್ರಹ್ಮಗಂಟು ನಟಿ ಸಖತ್ತಾಗಿ ಮೈ ಬಳುಕಿಸಿದ್ದಾರೆ. ಕಿರಣ್ ಕಾವೇರಪ್ಪ ಬರೆದಿರುವ "ರವಿ, ರವಿ, ರವಿಕೆ ಪ್ರಸಂಗ" ಎಂಬ ಟೈಟಲ್ ಸಾಂಗ್ ಜಂಕಾರ್ ಮ್ಯೂಸಿಕ್ ಮೂಲಕ ಅನಾವರಣವಾಗಿದೆ. ಈ ಹಾಡಿಗೆ ವಿನಯ್ ಶರ್ಮಾ ಸಂಗೀತ ನೀಡಿದ್ದು, ಚೈತ್ರ ಹಾಗೂ ಚೇತನ್ ನಾಯಕ್ ಧ್ವನಿ ನೀಡಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಈ ಹಾಡು ಬಿಡುಗಡೆಗೊಳಿಸಿ, ಸಿನಿಮಾ ಯಶಸ್ಸು ಕಾಣಲೆಂದು ಶುಭ ಹಾರೈಸಿದರು.
ನಿರ್ಮಾಪಕ ಸಂತೋಷ್ ಕೊಡೆಂಕೆರಿ ಮಾತನಾಡಿ, ಕಿರಣ್ ಕಾವೇರಪ್ಪ ರವಿಕೆ ಬಗ್ಗೆ ಒಳ್ಳೆಯ ಹಾಡು ಬರೆದಿದ್ದಾರೆ. ಅಷ್ಟೇ ಚೆನ್ನಾಗಿ ಚೈತ್ರ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ವಿನಯ್ ಶರ್ಮಾ ಸಂಗೀತದಲ್ಲಿ ಎಲ್ಲಾ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ರಹ್ಮಗಂಟು ಸೀರಿಯಲ್ ಮೂಲಕ ಛಾಪು ಮೂಡಿಸಿರುವ ಗೀತಾ ಭಾರತಿ ಇದೇ ಮೊದಲ ಬಾರಿಗೆ ನಾಯಕ ನಟಿಯಾಗಿ ನಟಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಗೀತಾ ಭಾರತಿ, ಚಿತ್ರದಲ್ಲಿ ನನ್ನ ಪಾತ್ರ ಬಹಳ ಚೆನ್ನಾಗಿದೆ. ಇಂದು ಬಿಡುಗಡೆ ಆಗಿರುವ "ರವಿಕೆ" ಹಾಡು ಹಾಗೂ ಚಿತ್ರ ಪ್ರೇಕ್ಷಕರ ಮನಗೆಲ್ಲಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.