ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ''ಟೈಗರ್ 3'' ಬಿಡುಗಡೆಗೆ ಕೇವಲ ಇನ್ನೊಂದು ದಿನ ಬಾಕಿ ಇದೆ. ಸಿನಿಮಾ ಈಗಾಗಲೇ ಸಖತ್ ಸದ್ದು ಮಾಡಿದೆ. ಪ್ರೇಕ್ಷಕರು ಸಿನಿಮಾ ವೀಕ್ಷಣೆಗೆ ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಖಾನ್ ಸೇರಿದಂತೆ ಚಿತ್ರತಂಡ ತಮ್ಮ ಸ್ಪೆ ಥ್ರಿಲ್ಲರ್ ಸಿನಿಮಾವನ್ನು ಪ್ರಚಾರ ಮಾಡುವಲ್ಲಿ ಬ್ಯುಸಿಯಾಗಿದೆ.
ಬಿಡುವಿಲ್ಲದ ಬ್ಯುಸಿ ಶೆಡ್ಯೂಲ್ ನಡುವೆಯೂ ನಟ ಸಲ್ಮಾನ್ ಖಾನ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಟೈಗರ್ 3 ಚಿತ್ರೀಕರಣ ಬಗೆಗಿನ ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡರು. ಅಲ್ಲದೇ, ಶೀಘ್ರದಲ್ಲೇ ಶುರುವಾಗಲಿರುವ ಟೈಗರ್ ವರ್ಸಸ್ ಪಠಾಣ್ ಸಿನಿಮಾ ಚಿತ್ರೀಕರಣದ ಬಗ್ಗೆ ಮಾತನಾಡಿದರು.
ಟೈಗರ್ 3 ಶೂಟಿಂಗ್ ಸವಾಲು: ಟೈಗರ್ 3 ಸಿನಿಮಾ ಶೂಟಿಂಗ್ ಸಂದರ್ಭದ ಸವಾಲುಗಳನ್ನು ಪ್ರಶ್ನಿಸಿದಾಗ ಸಲ್ಮಾನ್ ಖಾನ್ ಬೈಕ್ ಚೇಸಿಂಗ್ ದೃಶ್ಯ ಕಠಿಣವಾಗಿತ್ತು ಎಂದು ಬಹಿರಂಗಪಡಿಸಿದರು. ಗಮನಾರ್ಹ ಮಟ್ಟದಲ್ಲಿ ಚಿತ್ರೀಕರಣ ನಡೆಯಿತು ಎಂದು ತಿಳಿಸಿದ್ದಾರೆ. ನಿರ್ದೇಶಕ ಮನೀಶ್ ಶರ್ಮಾ ಅವರು ಆ ದೃಶ್ಯವನ್ನು ನನ್ನೊಂದಿಗೆ ವ್ಯಾಪಕವಾಗಿ ಚರ್ಚಿಸಿದರು. ನಂತರ ಅದನ್ನು ಕಾರ್ಯಗತಗೊಳಿಸಲು ಇಬ್ಬರು ಒಟ್ಟಾಗಿ ಕೆಲಸ ಮಾಡಿದ್ದೇವೆ ಎಂದು ಸಲ್ಮಾನ್ ತಿಳಿಸಿದ್ದಾರೆ.
ನಟನ ಮೆಚ್ಚಿನ ಹಾಡು?ಹೊರದೇಶ ಟರ್ಕಿಯ ಕಪ್ಪಡೋಸಿಯಾದಲ್ಲಿ (Cappadocia) ನಡೆದ ಲೆಕೆ ಪ್ರಭು ಕಾ ನಾಮ್ ನೃತ್ಯದ ಚಿತ್ರೀಕರಣವನ್ನು ಆನಂದಿಸಿದ್ದೇನೆ ಎಂದು ತಿಳಿಸಿದ ಸಲ್ಮಾನ್ ಖಾನ್, ಇದು ನನ್ನ ಮೆಚ್ಚಿನ ಹಾಡು ಎಂದು ಕೂಡ ಬಹಿರಂಗಪಡಿಸಿದರು. ಸಲ್ಮಾನ್, ನಾನು ಮತ್ತು ನನ್ನ ಸಹನಟಿ ಕತ್ರಿನಾ ಕೈಫ್ ಅವರು ಜಾಗತಿಕವಾಗಿ ಪ್ರೇಕ್ಷಕರನ್ನು ರಂಜಿಸಿದ ಕೆಲ ಅದ್ಭುತ ಸಾಂಗ್ಸ್ನಲ್ಲಿ ಕೆಲಸ ಮಾಡಿದ್ದು, ಅದೃಷ್ಟಶಾಲಿಗಳು ಎಂದು ಹೇಳಿಕೊಂಡಿದ್ದಾರೆ. ಲೇಕೆ ಪ್ರಭು ಕಾ ನಾಮ್ ಸಾಂಗ್ ಕೂಡ ಆ ಪಟ್ಟಿಗೆ ಸೇರ್ಪಡೆಯಾಗಿದೆ ಎಂದು ತಿಳಿಸಿದರು.