ಶಾರುಖ್ ಖಾನ್ ಅವರ ಇತ್ತೀಚಿನ ಬ್ಲಾಕ್ಬಸ್ಟರ್ ಸಿನಿಮಾ 'ಪಠಾಣ್'. ಸಲ್ಮಾನ್ ಖಾನ್ ಮುಖ್ಯಭೂಮಿಕೆಯ ಹಿಟ್ ಚಿತ್ರ 'ಟೈಗರ್'. ಇದೀಗ ''ಟೈಗರ್ vs ಪಠಾಣ್'' ಶೀರ್ಷಿಕೆಯ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಟೈಗರ್ ವರ್ಸಸ್ ಪಠಾಣ್ ಸ್ಕ್ರಿಪ್ಟ್ಗೆ ಬಾಲಿವುಡ್ ದಿಗ್ಗಜರಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆಂದು ವರದಿಯಾಗಿದೆ.
ಒಂದು ತಿಂಗಳ ಹಿಂದೆ ಪ್ರತ್ಯೇಕ ಮೀಟಿಂಗ್ಗಳಲ್ಲಿ ಶಾರುಖ್ ಮತ್ತು ಸಲ್ಮಾನ್ ಎದುರು ಟೈಗರ್ ವರ್ಸಸ್ ಪಠಾಣ್ ಸ್ಕ್ರಿಪ್ಟ್ ಪ್ರಸ್ತುತಪಡಿಸಲಾಗಿದೆ. ಇಬ್ಬರೂ ಸ್ಟಾರ್ ನಟರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪ್ರಾಜೆಕ್ಟ್ ಮುಂದುವರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ಚಿತ್ರಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳು ನವೆಂಬರ್ನಲ್ಲಿ ಪ್ರಾರಂಭ ಆಗಲಿದೆ. ಮುಂದಿನ ಮಾರ್ಚ್ನಲ್ಲಿ ಚಿತ್ರೀಕರಣ ಶುರುವಾಗಲಿದೆ. ಚಿತ್ರರಂಗದ ಮೂಲಗಳು ಈ ಚಿತ್ರದ ಬೆಳವಣಿಗೆ ಕುರಿತು ಮಾಹಿತಿ ಹಂಚಿಕೊಂಡಿವೆ. ಹಿಂದಿ ಚಿತ್ರರಂಗದ ಇಬ್ಬರು ದಿಗ್ಗಜರ ಕಾಂಬೋದ ಮಹತ್ವವವನ್ನು ಒತ್ತಿ ಹೇಳಿದ್ದಾರೆ. ಇಬ್ಬರು ಸ್ಟಾರ್ ನಟರನ್ನು ಒಂದೇ ಸ್ಕ್ರೀನ್ನಲ್ಲಿ ತಂದು, ಅಪ್ರತಿಮ ಸ್ಪೈ ಆ್ಯಕ್ಷನ್ ಸಿನಿಮಾ ಮಾಡಲು ಸಿದ್ಧತೆಗಳು ನಡೆಯುತ್ತಿವೆ.
ಚಿತ್ರರಂಗದ ಮೂಲಗಳು, ಸ್ಟಾರ್ ನಟರು ಒಂದೇ ಸಿನಿಮಾದಲ್ಲಿ ನಟಿಸಲು ಹೇಗೆ ಒಪ್ಪಿಕೊಂಡರು ಎಂಬುದಕ್ಕೆ ಕಾರಣವನ್ನೂ ಬಹಿರಂಗಪಡಿಸಿದೆ. ನಿರ್ಮಾಪಕ ಆದಿತ್ಯ ಚೋಪ್ರಾ, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರೊಂದಿಗೆ ಸಿನಿಮಾ ಬಗ್ಗೆ ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾರೆ. ಮೀಟಿಂಗ್ನಲ್ಲಿ ಸಿನಿಮಾದ ಸ್ಟೋರಿ ಲೈನ್ ಅನ್ನು ವಿವರಿಸಲಾಗಿದೆ. ಸೂಪರ್ ಸ್ಟಾರ್ಗಳು ಸ್ಕ್ರಿಪ್ಟ್ನಿಂದ ಪ್ರಭಾವಿತರಾಗಿದ್ದಾರೆ. ಹಾಗಾಗಿ ಯೋಜನೆ ಮುಂದುವರಿದಿದೆ. ಮಾರ್ಚ್ನಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಚಿತ್ರತಂಡದಿಂದ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ. ಸದ್ಯದ ಮಾಹಿತಿ ನಿಜವಾದರೆ, ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಪಕ್ಕಾ.