ಮನೀಶ್ ಶರ್ಮಾ ನಿರ್ದೇಶನದ 'ಟೈಗರ್ 3' ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿಸಿದೆ. ಈ ಸಿನಿಮಾ 2023ರ ಬಿಗ್ ಪ್ರಾಜೆಕ್ಟ್ ಆಗಿದೆ. ಸಿನಿಪ್ರಿಯರು ಸಾಕಷ್ಟು ನಿರೀಕ್ಷೆ, ಕುತೂಹಲ ಇಟ್ಟುಕೊಂಡಿದ್ದರು. ಅಭಿಮಾನಿಗಳಿಗೆ ದೀಪಾವಳಿ ಉಡುಗೊರೆಯಾಗಿ ನಟ ಸಲ್ಮಾನ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಅಭಿನಯದ ಈ ಚಿತ್ರ ತೆರೆಕಂಡಿತು. ಭಾನುವಾರ 'ಟೈಗರ್ 3' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಅಭಿಮಾನಿಗಳು ಸಿನಿಮಾವನ್ನು ಬಹಳ ಅದ್ಧೂರಿಯಾಗಿ ಸ್ವಾಗತಿಸಿದರು. ಐದು ದಿನಗಳಲ್ಲಿ ಸರಿಸುಮಾರು 187 ಕೋಟಿ ರೂ. ಗಳಿಸುವಲ್ಲಿ ಸಿನಿಮಾ ಯಶಸ್ವಿಯಾಗಿದೆ.
ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಟೈಗರ್ 3 ಮೊದಲ ಮೂರು ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ವಾರದ ದಿನಗಳಲ್ಲಿ ಅಂಕಿಅಂಶ ಕೊಂಚ ತಗ್ಗಿದೆ. ಮೊದಲ ಮೂರು ದಿನಗಳಿಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಎನಿಸಿದೆ. ಆದರೂ ಸಿನಿಮಾದ ಒಟ್ಟಾರೆ ಪ್ರದರ್ಶನ ಉತ್ತಮವಾಗಿದೆ. ನಾಲ್ಕನೇ ದಿನ (ಬುಧವಾರ)ದ ಕಲೆಕ್ಷನ್ 21 ಕೋಟಿ ರೂಪಾಯಿ. ಐದನೇ ದಿನ ಅಂದರೆ ನಿನ್ನೆಯ ಗಳಿಕೆ ಅಂದಾಜು ₹18.5 ಕೋಟಿ. ಈ ಮೂಲಕ ಚಿತ್ರದ ಒಟ್ಟು ಕಲೆಕ್ಷನ್ 187.65 ಕೋಟಿ ರೂಪಾಯಿ.
ಸಲ್ಮಾನ್ ಖಾನ್ ನಟನೆಯ ಈ ಸಿನಿಮಾ ವಿಶ್ವಾದ್ಯಂತ ಕೇವಲ ನಾಲ್ಕು ದಿನಗಳಲ್ಲಿ 271.50 ಕೋಟಿ ರೂ. ಗಳಿಸಿದೆ ಎಂಬ ಮಾಹಿತಿ ಇದೆ. ತೆರೆಕಂಡ ಒಂದು ವಾರದಲ್ಲಿ ಜಾಗತಿಕವಾಗಿ 300 ಕೋಟಿ ರೂ. ಗಡಿ ದಾಟಲು ಸಜ್ಜಾಗಿದೆ. ಆದಾಗ್ಯೂ, ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಿ, ವಾರದ ದಿನದಲ್ಲಿ ಭಾಯಿ ದೂಜ್ ರಜೆಯ ಲಾಭ ಪಡೆದಿದ್ದರೂ ಸಹ ಚಿತ್ರದ ಗಳಿಕೆ ದೇಶೀಯ ಮಾರುಕಟ್ಟೆಯಲ್ಲಿ ತಗ್ಗಿದೆ ಎಂದು ಸಿನಿ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕ್ರಿಕೆಟ್ ಫೀವರ್ ಟೈಗರ್ 3ರ ಗಳಿಕೆ ಮೇಲೆ ಪ್ರಭಾವ ಬೀರಿರಬಹುದು ಎಂದು ಕೂಡ ಅಂದಾಜಿಸಲಾಗಿದೆ.