ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಬಹು ನಿರೀಕ್ಷಿತ ಚಿತ್ರ 'ಟೈಗರ್ 3' ದೀಪಾವಳಿ ಉಡುಗೊರೆಯಾಗಿ ಭಾನುವಾರ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿತು. ಬಿಡುಗಡೆಗೂ ಮುನ್ನ ಸಖತ್ ಸದ್ದು ಮಾಡಿದ್ದ ಸಿನಿಮಾ ಎರಡು ದಿನಗಳಲ್ಲಿ 100 ಕೋಟಿ ರೂ.ನ ಕ್ಲಬ್ ಸೇರುವಲ್ಲಿ ಯಶ ಕಂಡಿದೆ. ಹೌದು, ಸಲ್ಮಾನ್ ಖಾನ್ - ಕತ್ರಿನಾ ಕೈಫ್ ಮುಖ್ಯಭೂಮಿಕೆಯ ಚಿತ್ರ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸೋಮವಾರದಂದು 57.52 ಕೋಟಿ ರೂ. ಗಳಿಸಿದೆ ಎಂದು ಸ್ಯಾಕ್ನಿಲ್ಕ್ ಮಾಹಿತಿ ನೀಡಿದೆ.
ಮನೀಶ್ ಶರ್ಮಾ ನಿರ್ದೇಶನದ 'ಟೈಗರ್ 3' ಸಿನಿಮಾ ತೆರೆಕಂಡ ಮೊದಲ ದಿನ ಅಂದರೆ ಭಾನುವಾರ 44.5 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ದಿನ 57.52 ಕೋಟಿ ರೂ. ಗಳಿಸೋ ಮೂಲಕ ಎರಡು ದಿನಗಳ ಒಟ್ಟು ಕಲೆಕ್ಷನ್ 102 ಕೋಟಿ ರೂ. ಆಗಿದೆ. ಈ ಮೂಲಕ ವರ್ಷದ ಸೂಪರ್ ಹಿಟ್ ಸಿನಿಮಾ ಆಗಿ ಟೈಗರ್ 3 ಹೊರಹೊಮ್ಮಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 44.5 ಕೋಟಿ ರೂ. ಗಳಿಸಿದೆ. ಈವರೆಗಿನ ಸಲ್ಮಾನ್ ಖಾನ್ ಚಿತ್ರಗಳ ಪೈಕಿ 'ಟೈಗರ್ 3' ಮೊದಲ ದಿನ ಅತಿ ಹೆಚ್ಚು ಸಂಗ್ರಹ ಮಾಡಿರುವ ಸಿನಿಮಾ. ಇದನ್ನು ತಿಳಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಸಿನಿ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಟೈಗರ್ 3 ಎರಡನೇ ದಿನ ಚಿತ್ರಮಂದಿರಗಳಲ್ಲಿ ಶೇ. 48.62 ರಷ್ಟು (ಹಿಂದಿ) ಆಕ್ಯುಪೆನ್ಸಿ ಹೊಂದಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಿಕೆಟ್ಸ್ ಖರೀದಿ ಗಮನಿಸಿದರೆ 94 ಕೋಟಿ ರೂ. ಕಲೆಕ್ಷನ್ ಮಾಡಿದೆ. ಜಾಗತಿಕ ಗಲ್ಲಾಪೆಟ್ಟಿಗೆ ಅಂಕಿ - ಅಂಶ ಇನ್ನಷ್ಟೇ ಬರಬೇಕಿದೆ.