ಮನೀಶ್ ಶರ್ಮಾ ನಿರ್ದೇಶನದ 'ಟೈಗರ್ 3' ಬಾಕ್ಸ್ ಆಫೀಸ್ನಲ್ಲಿ ಕುಸಿತ ಕಂಡಿದೆ. ನವೆಂಬರ್ 12 ರಂದು ತೆರೆ ಕಂಡ ಚಿತ್ರ 8ನೇ ದಿನದಂದು ಹಿನ್ನಡೆ ಅನುಭವಿಸಿದೆ. ಭಾನುವಾರ ನಡೆದ ವಿಶ್ವಕಪ್ ಫೈನಲ್ ಪಂದ್ಯ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಸಿನಿಮಾ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ದೇಶೀಯ ಗಲ್ಲಾಪೆಟ್ಟಿಯಲ್ಲಿ 48% ನಷ್ಟು ಕುಸಿತ ಕಂಡಿದೆ.
ನವೆಂಬರ್ 19, ಭಾನುವಾರದಂದು ನಡೆದ ವಿಶ್ವಕಪ್ ಫೈನಲ್ ಪಂದ್ಯ ಪ್ರೇಕ್ಷಕರನ್ನು ಚಿತ್ರಮಂದಿರಗಳಿಂದ ದೂರ ಉಳಿಸಿತ್ತು. ಈ ಹಿನ್ನೆಲೆ 'ಟೈಗರ್ 3' ಚಿತ್ರವು ಸುಮಾರು 10.25 ಕೋಟಿ ರೂಪಾಯಿ ಗಳಿಸಿತು. ಈವರೆಗಿನ ಕಲೆಕ್ಷನ್ನಲ್ಲಿ ಇದು ಅತ್ಯಂತ ಕಡಿಮೆ ಎನ್ನಬಹುದು. ಈ ಮೂಲಕ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ ಚಿತ್ರದ ಒಟ್ಟು ಕಲೆಕ್ಷನ್ 229.65 ಕೋಟಿ ರೂಪಾಯಿ ಆಗಿದೆ. ದಿನವಿಡೀ 14.75%ನ ಒಟ್ಟಾರೆ ಆಕ್ಯುಪೆನ್ಸಿ ಗಮನಾರ್ಹವಾಗಿ ಕಡಿಮೆಯಾಗಿದೆ.
ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ 'ಟೈಗರ್ 3' ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಿ, ವಾರದ ದಿನದಲ್ಲಿ ಭಾಯಿ ದೂಜ್ ರಜೆಯ ಲಾಭ ಪಡೆದಿದ್ದರೂ ಸಹ ಚಿತ್ರದ ಗಳಿಕೆ ದೇಶೀಯ ಮಾರುಕಟ್ಟೆಯಲ್ಲಿ ತಗ್ಗಿದೆ ಎಂದು ಸಿನಿ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಆದಷ್ಟು ಶೀಘ್ರದಲ್ಲೇ 300 ಕೋಟಿ ರೂಪಾಯಿ ಕಲೆಕ್ಷನ್ ಸೇರುವ ನಿರೀಕ್ಷೆ ಇದೆ. ನವೆಂಬರ್ 12ರಂದು ಪ್ರಪಂಚದಾದ್ಯಂತ 8000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆ ಕಂಡಿತ್ತು.
ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಿಶಾಲ್ ಜೇತ್ವಾ ಕಾಣಿಸಿಕೊಂಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿ ನಿರ್ಮಾಪಕ ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸಿದ್ದಾರೆ. 2017ರ ಟೈಗರ್ ಜಿಂದಾ ಹೈ ಚಿತ್ರದ ಮುಂದುವರಿದ ಭಾಗವೇ ಟೈಗರ್ 3. ಯಶ್ ರಾಜ್ ಫಿಲ್ಮ್ಸ್ನ ಸ್ಪೈ ಯೂನಿವರ್ಸ್ ಪ್ರಮುಖ ಪ್ರೊಜೆಕ್ಟ್. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ದೀಪಾವಳಿ ಸಂದರ್ಭ ಭರ್ಜರಿ ಓಪನಿಂಗ್ ಪಡೆದಿದ್ದು, ಮಾತ್ರವಲ್ಲದೇ ಸಲ್ಮಾನ್ ಖಾನ್ ಅವರ ಸಿನಿಮಾಗಳ ಪೈಕಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಫೈನಲ್ ಪಂದ್ಯದ ಸಂಕ್ಷಿಪ್ತ ಮಾಹಿತಿ: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಭಾನುವಾರ ಅಂತಿಮ ಕದನ ನಡೆಯಿತು. ಮೊದಲು ಬ್ಯಾಟ್ ಮಾಡಿದ ಭಾರತ 240 ರನ್‌ಗಳಿಗೆ ಸೀಮಿತವಾಯಿತು. ಮಿಚೆಲ್ ಸ್ಟಾರ್ಕ್ ನೇತೃತ್ವದ ಆಸೀಸ್ ಬೌಲರ್‌ಗಳ ಅದ್ಭುತ ಪ್ರದರ್ಶನ ಹಾಗು ಟ್ರಾವಿಸ್ ಹೆಡ್ ಅವರ ಶತಕದಾಟ ಭಾರತಕ್ಕೆ ಮುಳುವಾಯಿತು. ಹೆಡ್ 120 ಎಸೆತಗಳಲ್ಲಿ 137 ರನ್ ಗಳಿಸುವುದರೊಂದಿಗೆ ತಂಡ 43 ಓವರ್‌ಗಳಲ್ಲಿ 241 ರನ್ ಗಳಿಸಿತು. ಅಂತಿಮವಾಗಿ ಆತಿಥೇಯರ ವಿಶ್ವ ಚಾಂಪಿಯನ್ ಕನಸು ಭಗ್ನಗೊಂಡಿತು.
ಇದನ್ನೂ ಓದಿ:ರುಬಾಯ್ ಮತ್ತು ಜೋಯಾ ಮುಖಾಮುಖಿಯಾದರೆ ಗೆಲ್ಲೋರ್ಯಾರು?: ಕತ್ರಿನಾ ಕೈಫ್ ಹೇಳಿದ್ದು ಹೀಗೆ..