ಮನೀಶ್ ಶರ್ಮಾ ನಿರ್ದೇಶನದ ಬಹುನಿರೀಕ್ಷಿತ 'ಟೈಗರ್ 3' ಸಿನಿಮಾ ದೀಪಾವಳಿ ಶುಭ ಸಂದರ್ಭದಲ್ಲಿ ತೆರೆಕಂಡು ಉತ್ತಮ ಪ್ರದರ್ಶನ ಮುಂದುವರಿಸಿದೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಸ್ಪೈ ಸಿನಿಮಾದಲ್ಲಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಪ್ರತಿಭಾನ್ವಿತ ನಟಿ ಕತ್ರಿನಾ ಕೈಫ್, ಜನಪ್ರಿಯ ನಟ ಇಮ್ರಾನ್ ಹಶ್ಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರೀಕ್ಷೆಯಂತೆ ಟೈಗರ್ 3 ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಓಪನಿಂಗ್ ಪಡೆದು, ಉತ್ತಮ ಅಂಕಿ ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಮುಂದುವರಿಸಿದೆ.
ದೊಡ್ಡ ಅಂಕಿ ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿದ ಸಿನಿಮಾ ತನ್ನ ನಾಲ್ಕನೇ ದಿನದ ಕಲೆಕ್ಷನ್ನಲ್ಲಿ ಶೇ. 25 ರಷ್ಟು ಇಳಿಕೆ ಕಂಡಿದೆ. ಅದಾಗ್ಯೂ, ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಚಿತ್ರ ಕೇವಲ ನಾಲ್ಕು ದಿನಗಳಲ್ಲಿ ಒಟ್ಟು 169 ಕೋಟಿ ರೂ. ಸಂಗ್ರಹಿಸಿದೆ. ವಾರದ ದಿನಗಳಾದ ಹಿನ್ನೆಲೆ ಅಂಕಿ ಅಂಶ ಕೊಂಚ ತಗ್ಗಿದೆ. ಈ ವಾರಾಂತ್ಯ ಕಲೆಕ್ಷನ್ ಏರುವ ನಿರೀಕ್ಷೆ ಇದೆ. ಸಿನಿಮಾ 200 ಕೋಟಿ ರೂಪಾಯಿಗಳ ಗಡಿ ದಾಟುವ ಹಾದಿಯಲ್ಲಿದೆ.
ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಸ್ಪೈ ಸಿನಿಮಾಗಳ ಸಾಲಿನಲ್ಲಿ 'ಟೈಗರ್ 3' ಐದನೇ ಚಿತ್ರ. ಚಿತ್ರ ಬಿಡುಗಡೆಯಾದ ದಿನ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಮೆಚ್ಚಿನ ನಟನ ಸಿನಿಮಾವನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಹೆಚ್ಚಾಗಿ ಸಕಾರಾತ್ಮಕ ಸ್ಪಂದನೆ ಸ್ವೀಕರಿಸಿದ ಸಿನಿಮಾ ಮೊದಲ ದಿನ ಭಾರತದಲ್ಲಿ 44.50 ಕೋಟಿ ರೂಪಾಯಿ ಗಳಿಸಿತು. ಆದ್ರೆ ಬುಧವಾರ ಚಿತ್ರದ ಕಲೆಕ್ಷನ್ನಲ್ಲಿ ಸುಮಾರು ಶೇ. 25 ರಷ್ಟು ಕುಸಿತ ಆಗಿದೆ. ಟೈಗರ್ 3 ನಾಲ್ಕನೇ ದಿನ 22 ಕೋಟಿ ರೂ. ಸಂಗ್ರಹ ಮಾಡಿದೆ. ಚಿತ್ರ ಭಾರತದಲ್ಲಿ 169.50 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಯಶಸ್ಸು ಕಂಡಿದೆ. ನಾಲ್ಕನೇ ದಿನ ಚಿತ್ರಮಂದಿರಗಳಲ್ಲಿ ಸರಿಸುಮಾರು ಶೇ. 18.78 ರಷ್ಟು ಆಕ್ಯುಪೆನ್ಸಿ ದರ ಹೊಂದಿತ್ತು.