ಕರ್ನಾಟಕ

karnataka

ETV Bharat / entertainment

'ಟಗರು ಪಲ್ಯ' ಬ್ಲಾಕ್​ಬಸ್ಟರ್​; ಹ್ಯಾಟ್ರಿಕ್​ ಗೆಲುವಿನಲ್ಲಿ ಡಾಲಿ ಧನಂಜಯ್​ - ಈಟಿವಿ ಭಾರತ ಕನ್ನಡ

'ಟಗರು ಪಲ್ಯ' ಬ್ಲಾಕ್​ಬಸ್ಟರ್​ ಹಿಟ್ ಆಗುವುದರೊಂದಿಗೆ​ ಡಾಲಿ ಧನಂಜಯ್​ ಹ್ಯಾಟ್ರಿಕ್​ ಗೆಲುವಿನ ಸಂತಸದಲ್ಲಿದ್ದಾರೆ.

Three films produced by Daali Dhananjay are blockbuster hits
'ಟಗರು ಪಲ್ಯ' ಬ್ಲಾಕ್​ಬಸ್ಟರ್​; ಹ್ಯಾಟ್ರಿಕ್​ ಗೆಲುವಿನಲ್ಲಿ ಡಾಲಿ ಧನಂಜಯ್​

By ETV Bharat Karnataka Team

Published : Oct 29, 2023, 5:36 PM IST

ಕನ್ನಡ ಚಿತ್ರರಂಗದ ನಟರಾಕ್ಷಸ ಡಾಲಿ ಧನಂಜಯ್​ ನಟನೆಯ ಜೊತೆಗೆ ಚಿತ್ರ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಜೊತೆ ತಮ್ಮದೇ ಡಾಲಿ ಪಿಕ್ಚರ್ಸ್​ ಸಂಸ್ಥೆಯಡಿ ಚಿತ್ರ ನಿರ್ಮಿಸುತ್ತಿದ್ದಾರೆ. ಈಗಾಗಲೇ ಎರಡು ಸಿನಿಮಾಗಳಿಗೆ ನಿರ್ಮಾಪಕರಾಗಿ ಸಕ್ಸಸ್​ ಕಂಡಿದ್ದ ಧನಂಜಯ್​ ಇದೀಗ ಮತ್ತೊಂದು ಚಿತ್ರವು ಬ್ಲಾಕ್​ಬಸ್ಟರ್​ ಹಿಟ್​ ಆಗಿದೆ. ಈ ಮೂಲಕ ನಿರ್ಮಾಣದಲ್ಲಿ ದಾಖಲೆ ಬರೆದಿರುವ ಡಾಲಿ ಹ್ಯಾಟ್ರಿಕ್​ ಗೆಲುವು ದಾಖಲಿಸಿದ್ದಾರೆ.

ಡಾಲಿ ಧನಂಜಯ್​ ಅವರ ನಿರ್ಮಾಣ ಸಂಸ್ಥೆ 'ಡಾಲಿ ಪಿಕ್ಚರ್ಸ್​'. 'ಬಡವ ರಾಸ್ಕಲ್'​ ಸಿನಿಮಾಗೆ ಬಂಡವಾಳ ಹೂಡುವ ಮೂಲಕ ನಿರ್ಮಾಣಕ್ಕಿಳಿದ ನಟರಾಕ್ಷಸ ಈವರೆಗೆ ಮೂರು ಸಿನಿಮಾಗಳನ್ನು ಮಾಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬ ಉದ್ದೇಶದಿಂದಲೇ ಈ ನಿರ್ಮಾಣ ಸಂಸ್ಥೆಯನ್ನು ಅವರು ಪ್ರಾರಂಭಿಸಿದ್ದಾರೆ. ಅದರಂತೆ ತಮ್ಮ ಬ್ಯಾನರ್​ ಅಡಿಯಲ್ಲಿ ಯುವ ಪ್ರತಿಭಾವಂತ ಕಲಾವಿದರಿಗೆ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ.

ಡಾಲಿಗೆ ಹ್ಯಾಟ್ರಿಕ್​ ಜಯ:'ಬಡವ ರಾಸ್ಕಲ್' ಸಿನಿಮಾದಲ್ಲಿ ನಟನೆ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಡಾಲಿ, ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸುವ ಜೊತೆಗೆ ಮೊದಲ ಪ್ರಯತ್ನದಲ್ಲೇ ದೊಡ್ಡ ಮಟ್ಟದ ಗೆಲುವು ದಾಖಲಿಸಿದರು. ಅದೇ ಹುಮ್ಮಸ್ಸಿನಲ್ಲಿ ಡಾಲಿ ಮತ್ತೊಂದು ಸಿನಿಮಾಗೆ ಬಂಡವಾಳ ಹೂಡಿ ಗೆಲುವು ಕಂಡರು. ಡಾಲಿ ನಿರ್ಮಾಣದಲ್ಲಿ ಮೂಡಿಬಂದ ಎರಡನೇ ಸಿನಿಮಾ 'ಹೆಡ್ ಬುಷ್'.

ಇದನ್ನೂ ಓದಿ:ಕೆ.ಆರ್.ಜಿ ಸ್ಟುಡಿಯೋಸ್​ಗೆ 'ಸೆಂಚುರಿ ಸಿನಿಮಾ' ಸಂಭ್ರಮ: ಒಂದೇ ದಿನ ಎರಡು ಫಿಲ್ಮ್ ರಿಲೀಸ್​​

ಬೆಂಗಳೂರಿನ ಭೂಗತ ಪಾತಾಕಿ ಡಾನ್ ಜಯರಾಜ್ ಜೀವನ ಆಧಾರಿತ ಕಥೆಗೆ ಜೀವ ತುಂಬುವ ಜೊತೆಗೆ ಹಣವನ್ನು ಹೂಡಿದರು. ಜಯರಾಜ್ ಆಗಿ ಸ್ವತಃ ಧನಂಜಯ್ ಅವರೇ ಕಾಣಿಸಿಕೊಂಡರು. 'ಹೆಡ್ ಬುಷ್' ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಮೂಲಕ ಡಾಲಿ ಪಿಕ್ಚರ್​ನ ಸಕ್ಸಸ್ ಲಿಸ್ಟ್​ಗೆ ಸೇರಿತು. ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ ಖುಷಿಯಲ್ಲಿ ಧನಂಜಯ್ 'ಟಗರು ಪಲ್ಯ' ಸಿನಿಮಾ ಕೈಗೆತ್ತಿಕೊಂಡರು.

'ಟಗರು ಪಲ್ಯ' ಸಿನಿಮಾದಲ್ಲಿ ಧನಂಜಯ್ ಕಾಣಿಸಿಕೊಂಡಿಲ್ಲ. ಬದಲಿಗೆ ನಟ ನಾಗಭೂಷಣ್, ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಟಿಸಿದ್ದಾರೆ. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ 'ಟಗರು ಪಲ್ಯ' ಕೂಡ ಸೂಪರ್ ಸಕ್ಸಸ್ ಆಗಿದೆ. ಅಕ್ಟೋಬರ್ 27ಕ್ಕೆ ರಿಲೀಸ್ ಆಗಿರುವ ಈ ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ. ಈ ಮೂಲಕ ಡಾಲಿ ಹ್ಯಾಟ್ರಿಕ್ ಗೆಲುವನ್ನು ದಾಖಲಿಸಿದ ಖುಷಿಯಲ್ಲಿದ್ದಾರೆ.

'ಟಗರು ಪಲ್ಯ' ಸಿನಿಮಾ ನೋಡಿದ ಪ್ರತಿಯೊಬ್ಬರು ಮೆಚ್ಚಿಕೊಂಡಿದ್ದಾರೆ. ಫ್ಯಾಮಿಲಿ ಸಮೇತರಾಗಿ ಥಿಯೇಟರ್​ಗೆ ಬಂದು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಬಿಡುಗಡೆ ಆದ ಎರಡೇ ದಿನಕ್ಕೆ ಪ್ರೇಕ್ಷಕರ ಬೇಡಿಕೆ ಮೇರೆಗೆ ಥಿಯೇಟರ್​ಗಳ ಸಂಖ್ಯೆ ದುಪ್ಪಟ್ಟಾಗಿದೆ. ಈ ಮೂಲಕ ನಟರಾಕ್ಷಸ ಧನಂಜಯ್​ ನಿರ್ಮಾಣದಲ್ಲೂ 'ಕಿಂಗ್' ಎಂದು ಸಾಬೀತುಪಡಿಸಿದ್ದಾರೆ. ಇನ್ನಷ್ಟು ಉತ್ತಮ ಸಿನಿಮಾಗಳು ಅವರಿಂದ ಮೂಡಿಬರಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಇದನ್ನೂ ಓದಿ:'ಟಗರು ಪಲ್ಯ' ಟ್ರೇಲರ್​ ಬಿಡುಗಡೆ: ಡಾಲಿ ಪಿಕ್ಚರ್ಸ್​ನಡಿ ನನಗೂ ಅವಕಾಶ ಕೊಡಿ- ದರ್ಶನ್​

ABOUT THE AUTHOR

...view details