ಬೆಂಗಳೂರು: ನಟ ಕಿಚ್ಚ ಸುದೀಪ್ಗೆ ಅನಾಮಧೇಯ ಬೆದರಿಕೆ ಪತ್ರಗಳನ್ನು ಕಳುಹಿಸಿ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ನಿರ್ದೇಶಕ ರಮೇಶ್ ಕಿಟ್ಟಿ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆಲ ಕಾಲ ಸುದೀಪ್ ಆಪ್ತವಲಯದಲ್ಲಿದ್ದ ಆರೋಪಿ, ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷನಾಗಿಯೂ ಕೆಲಸ ನಿರ್ವಹಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಹಣಕಾಸು ವಿಚಾರವಾಗಿ ಅವರಿಬ್ಬರ ಮಧ್ಯೆ ವೈಷಮ್ಯ ಉಂಟಾಗಿತ್ತು.
ಈ ಕಾರಣಕ್ಕೆ ದೂರವಾಗಿದ್ದ ರಮೇಶ್, ಸುದೀಪ್ ಅವರಿಗೆ ಬೆದರಿಕೆ ಪತ್ರ ಕಳುಹಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣದ ತನಿಖೆ ಆರಂಭಿಸಿದ ಸಿಸಿಬಿ ಪೊಲೀಸರಿಗೆ ಆರೋಪಿ ರಮೇಶ್ ಕಿಟ್ಟಿ ಈ ಕೃತ್ಯ ಎಸಗಿರುವುದರ ಕುರಿತು ಪುರಾವೆಗಳು ಸಿಗುತ್ತಿದ್ದಂತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ವಿಚಾರಣೆಗೆ ಹಾಜರಾಗಿದ್ದ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಮೇಶ್ ಜೊತೆ ಸುದೀಪ್ ಮನಸ್ತಾಪ: ಕಿಚ್ಚ ಸುದೀಪ್ ಅವರ ಅಭಿಮಾನಿಯಾಗಿದ್ದ ರಮೇಶ್ ಕಿಟ್ಟಿ, ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸ್ವತಃ ತಾವೇ 2 ಕೋಟಿಯನ್ನು ಟ್ರಸ್ಟ್ನಲ್ಲಿ ಹೂಡಿಕೆ ಮಾಡಿದ್ದರಂತೆ. ಆದರೆ ಹಣವನ್ನು ಸುದೀಪ್ ಹಿಂತಿರುಗಿಸದ ಕಾರಣ ಸಿಟ್ಟಾಗಿದ್ದ ರಮೇಶ್ ಟ್ರಸ್ಟ್‌ನಿಂದ ಹೊರ ಬಂದಿದ್ದರು ಎನ್ನಲಾಗಿದೆ. ಸದ್ಯ ಹಣದ ವ್ಯವಹಾರದ ಕುರಿತು ಯಾವುದೇ ದಾಖಲೆಗಳಿಲ್ಲ, ತನಿಖೆಗೆ ಅಗತ್ಯವೆನಿಸಿದರೆ ಸುದೀಪ್ರ ಹೇಳಿಕೆಯನ್ನೂ ಪಡೆಯಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.