ನಟ ಡಾಲಿ ಧನಂಜಯ್ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ನಡಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ 'ಟಗರು ಪಲ್ಯ'. ಈ ಬಾರಿ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆಯಾಗಿದೆ. 'ಹನಿಮೂನ್' ವೆಬ್ ಸಿರೀಸ್ ಖ್ಯಾತಿಯ ನಾಗಭೂಷಣ್, ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಉಮೇಶ್. ಕೆ. ಕೃಪ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಬುಧವಾರ ‘ಟಗರು ಪಲ್ಯ’ ಸಿನಿಮಾ ಮುಹೂರ್ತ ಆಚರಿಸಿಕೊಂಡಿದ್ದು, ಡಿಸೆಂಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭಿಸಲಿದೆ.
ಡಾಲಿ ಧನಂಜಯ್ ಮಾತನಾಡಿ, ಡಾಲಿ ಪಿಕ್ಚರ್ಸ್ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡಲಾಗುತ್ತೆ ಎಂದು ನಾನು ಹಿಂದೆಯೇ ಹೇಳಿದ್ದೆ. ಉಮೇಶ್ ಕೆ ಕೃಪ ‘ಟಗರು ಪಲ್ಯ’ ಕಥೆ ಹೇಳಿದಾಗ ತುಂಬಾ ಖುಷಿ ಆಯ್ತು. ಅದ್ಭುತವಾದ ರೈಟರ್. ಸೆಟ್ ಹುಡುಗ ಆಗಿ ಕೆಲಸ ಆರಂಭಿಸಿ, ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಈಗ ನಿರ್ದೇಶಕನಾಗುತ್ತಿದ್ದಾರೆ.
ಬಡ ಕುಟುಂಬದಿಂದ ಬಂದು ನಿರ್ದೇಶಕನಾಗುತ್ತಿದ್ದಾರೆ. ಚಿತ್ರರಂಗಕ್ಕೆ ಒಳ್ಳೆ ಗಿಫ್ಟ್ ಆಗೋ ಎಲ್ಲ ಲಕ್ಷಣಗಳು ಅವರಲ್ಲಿದೆ. ನಮ್ಮ ಬ್ಯಾನರ್ನಿಂದ ಒಳ್ಳೆಯ ನಿರ್ದೇಶಕರು ಬರಲಿ ಎಂದು ಈ ಸಿನಿಮಾ ಆರಂಭಿಸಿದ್ವಿ ಎಂದು ನಿರ್ದೇಶಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಧನಂಜಯ್ ಏನ್ ಹೇಳಿದ್ರು?:ಇಡೀ ಕಥೆ ಮಂಡ್ಯದ ಹಳ್ಳಿಯಲ್ಲಿ ನಡೆಯುವ ಆಚರಣೆ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ. ಎಮೋಶನಲ್ ಎಂಟಟೈನ್ಮೆಂಟ್ ಸಿನಿಮಾವಿದು. ನಾಗಭೂಷಣ್ ಈಗಾಗಲೇ ಇಕ್ಕಟ್, ಹನಿಮೂನ್, ಬಡವ ರಾಸ್ಕಲ್ ಸಿನಿಮಾದಲ್ಲಿ ತಮ್ಮ ಪ್ರತಿಭೆ ಪ್ರೂವ್ ಮಾಡಿದ್ದಾರೆ. ಪ್ರೇಮ್ ಸರ್ ಮಗಳನ್ನು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಮಾಡುತ್ತಿದ್ದೇವೆ. ತುಂಬಾ ದೊಡ್ಡ ಜವಾಬ್ದಾರಿ ಇದು. ಕನ್ನಡ ಚಿತ್ರರಂಗದ ಮಹಾಲಕ್ಷ್ಮಿ ಆಗಿ ಅಮೃತಾ ಬೆಳಗಲಿ ಎಂದು ಧನಂಜಯ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.
ನೆನಪಿರಲಿ ಪ್ರೇಮ್ ಮಾತನಾಡಿ, ನನ್ನ ಮಗಳಿಗೆ ಒಳ್ಳೆ ಕಥೆ ಬಂದಿದೆ. ಸಿನಿಮಾದಲ್ಲಿ ಆ್ಯಕ್ಟ್ ಮಾಡ್ತಿಯ ಎಂದು ಕೇಳಿದೆ. ಇಷ್ಟು ದಿನ ಮಾಡಲ್ಲ ಅಂತಿದ್ದವಳು, ಒಂದೇ ಸರಿ ಒಕೆ ಅಂದ್ಲು. ಕಥೆ ಓದಿದೆ ನನಗೂ ಹಾಗೂ ಮಗಳಿಗೂ ತುಂಬಾ ಇಷ್ಟವಾಯ್ತು ಒಕೆ ಅಂದ್ವಿ. ಡಾಲಿ ಪ್ರೊಡಕ್ಷನ್ ಮಾಡ್ತಿದ್ದಾನೆ ಎಂದು ಗೊತ್ತಾಗಿ ತುಂಬಾ ಖುಷಿ ಆಯ್ತು. ಇಲ್ಲಿವರೆಗೆ ನಮ್ಮನ್ನು ಬೆಳೆಸಿದ್ದೀರಾ?. ನನ್ನ ಮಗಳಿಗೂ ಪ್ರೋತ್ಸಾಹ ನೀಡಿ ಎಂದು ಪ್ರೇಮ್ ಸಂತಸ ಹಂಚಿಕೊಂಡ್ರು.