ಕನ್ನಡ ಸಿನಿಮಾಗಳು ಈಗ ವಿಶ್ವದಾದ್ಯಂತ ಸದ್ದು ಮಾಡುತ್ತಿವೆ. ಕಂಟೆಂಟ್, ಕ್ವಾಲಿಟಿ, ಮೇಕಿಂಗ್ ವಿಚಾರದಲ್ಲಿ ಯಾವ ಚಿತ್ರರಂಗಕ್ಕೂ ಕಡಿಮೆ ಇಲ್ಲ ಅನ್ನೋದನ್ನು ಸ್ಯಾಂಡಲ್ವುಡ್ ಸಾಬೀತು ಪಡಿಸಿದೆ. ಯಾವ ಮಟ್ಟಿಗೆ ಅಂದ್ರೆ ಪರಭಾಷೆಯ ಸಿನಿಮಾದವರು ಕನ್ನಡ ಚಿತ್ರಗಳ ಕ್ವಾಲಿಟಿ ಹಾಗು ಕಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವಷ್ಟರ ಮಟ್ಟಕ್ಕೆ ಬಂದಿವೆ.
ಉತ್ತಮ ಕಂಟೆಂಟ್ ಇರುವ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಸಿನಿಮಾ. ಎವರ್ ಗ್ರೀನ್ ಹೀರೋ ಅನಂತ್ ನಾಗ್ ಹಾಗು ದೂದ್ ಪೇಡಾ ದಿಗಂತ್ ಕಾಂಬಿನೇಷನ್ನಲ್ಲಿ ಬರಲಿರುವ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಚಿತ್ರ ಈ ವರ್ಷದ ಹಿಟ್ ಸಿನಿಮಾಗಳ ಸಾಲಿಗೆ ಸೇರಿಕೊಳ್ಳುವ ಸೂಚನೆ ಕೊಟ್ಟಿದೆ. ಇಂದು ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ.
ಅನಂತನಾಗ್ ಹಾಗು ದಿಗಂತ್, ತಾತ- ಮೊಮ್ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂವತ್ತು ವರ್ಷಗಳ ನಂತರ ತಾತ ಹಾಗೂ ಮೊಮ್ಮಗ ಭೇಟಿಯಾದಾಗ ಆಗುವ ಸಂತೋಷ, ಪ್ರೀತಿ, ಎಮೋಷನ್, ಜೊತೆಗೆ ಕೊಂಚ ಕಿರಿಕಿರಿ ಬಗ್ಗೆ ಈ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಸಂಬಂಧಗಳನ್ನು ಗಟ್ಟಿಗೊಳಿಸುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.
ಈ ಚಿತ್ರದಲ್ಲಿ ಅನಂತ್ ನಾಗ್ ಸಿನಿಪ್ರಿಯರನ್ನು ಮನರಂಜಿಸುವ ಜೊತೆಗೆ ಭಾವುಕರನ್ನಾಗಿಸಲಿದ್ದಾರೆ. ಇನ್ನು, ನಟ ದಿಗಂತ್ ಅವರು ಅನಂತ್ ನಾಗ್ ಅವರ ಸ್ವಂತ ಮೊಮ್ಮಗನಾ ಅನ್ನುವಷ್ಟರ ಮಟ್ಟಿಗೆ ಅಭಿಯಿಸಿದ್ದಾರೆ. ಉಳಿದಂತೆ ಶುಭ್ರ ಅಯ್ಯಪ್ಪ, ಐಂದ್ರಿತಾ ರೇ, ರುಕ್ಮಿಣಿ ವಿಜಯಕುಮಾರ್, ವಿನೀತ್ ಬೀಪ್ ಕುಮಾರ್, ಪ್ರಕಾಶ್ ತುಮ್ಮಿನಾಡ್, ಕೆ.ಎಸ್.ಶ್ರೀಧರ್, ಮಿಮಿಕ್ರಿ ಗೋಪಿ, ಅಂಬುಜಾಕ್ಷಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಜಯಂತ್ ಕಾಯ್ಕಿಣಿ ಹಾಡುಗಳನ್ನು ಬರೆದಿದ್ದಾರೆ. ಬಾಲಕೃಷ್ಣ ತೋಟ ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ. ಬೆಂಗಳೂರು, ಕೊಡಗು ಹಾಗೂ ಕುಣಿಗಲ್ ನಲ್ಲಿ ಚಿತ್ರೀಕರಣ ನಡೆದಿದೆ. ಕುಣಿಗಲ್ನಲ್ಲಿರುವ 200 ವರ್ಷಗಳ ಇತಿಹಾಸ ಹೊಂದಿರುವ ಈ ಹಳೇ ಕಾಲದ ಮನೆ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಚಿತ್ರದ ಹೈಲೆಟ್ಸ್.
ಇದನ್ನೂ ಓದಿ:ತಿಮ್ಮಯ್ಯ ಮತ್ತು ತಿಮ್ಮಯ್ಯ ಚಿತ್ರದಲ್ಲಿ ಅನಂತ್ ನಾಗ್ - ದಿಗಂತ್ ಕಮಾಲ್
ಗರುಡ ಮೋಷನ್ ಪಿಕ್ಚರ್ಸ್ ಪ್ರೈ ಲಿ ಲಾಂಛನದಲ್ಲಿ ರಾಜೇಶ್ ಶರ್ಮ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮೂಲತಃ ಕನ್ನಡದವರೇ ಆಗಿರುವ ನಿರ್ದೇಶಕ ಸಂಜಯ್ ಶರ್ಮ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಬಾಲಿವುಡ್ನ ಖ್ಯಾತ ನಿರ್ದೇಶಕರ ಬಳಿ ಕಾರ್ಯ ನಿರ್ವಹಿಸಿರುವ ಸಂಜಯ್ ಶರ್ಮ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಸದ್ಯ ಟ್ರೈಲರ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಕ್ರೇಜ್ ಹುಟ್ಟಿಸಿರೋ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಸಿನಿಮಾ ಡಿಸೆಂಬರ್ 2ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.