ತಮ್ಮ ಅಮೋಘ ಆಭಿನಯದ ಮೂಲಕ ಕನ್ನಡ ಸಿನಿಮಾರಂಗ ಅಲ್ಲದೇ ಇಡೀ ಭಾರತೀಯ ಚಿತ್ರರಂಗದ ಅಭಿಮಾನಿಗಳ ಮನ ಗೆದ್ದಿರುವ ನಟ ಅನಂತ್ ನಾಗ್. ಇವರ ಜತೆ ದೂದ್ ಪೇಡ ದಿಗಂತ್ ಸ್ಕ್ರೀನ್ ಹಂಚಿಕೊಂಡು ಹಿಟ್ ಜೋಡಿ ಅಂತಾ ಕರೆಸಿಕೊಂಡಿದೆ. ಇದೀಗ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಚಿತ್ರದಲ್ಲಿ ಅನಂತ್ ನಾಗ್ ಮತ್ತು ದಿಗಂತ್ ತಾತ-ಮೊಮ್ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಬಗ್ಗೆ ಮಾತನಾಡಿರೋ ನಟ ಅನಂತ್ ನಾಗ್, ನನಗೆ ಮುಂಬೈನಿಂದ ನಿರ್ದೇಶಕ ಸಂಜಯ್ ಶರ್ಮ ಈ ಚಿತ್ರದ ಸ್ಕ್ರಿಪ್ಟ್ ಕಳುಹಿಸಿದ್ದರು. ಸ್ಕ್ರಿಪ್ಟ್ ಇಂಗ್ಲಿಷ್ನಲ್ಲಿತ್ತು. ಓದುತ್ತ ಹೋದಾಗ, ಕಥೆ ತುಂಬಾ ಹಿಡಿಸಿತು. ಬೆಂಗಳೂರಿಗೆ ಬನ್ನಿ ಮಾತನಾಡೋಣ ಎಂದೆ. ಕರ್ನಾಟಕದವರೇ ಆದ ಸಂಜಯ್ ಶರ್ಮ ಮುಂಬೈನಲ್ಲಿ ಆ್ಯಡ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ನಿಜಕ್ಕೂ ಒಳ್ಳೆಯ ಕಥೆ ಮಾಡಿದ್ದಾರೆ. ಅವರ ತಮ್ಮ ರಾಜೇಶ್ ಶರ್ಮ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಾನು ಈವೆರೆಗೂ ಮಾಡಿರದ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ ಎಂದರು.
ನಟ ದಿಗಂತ್ ಮಾತನಾಡಿ, ನನಗೆ ಸಂಜಯ್ ಅವರು ಈ ಕಥೆ ಹೇಳಿದಾಗ, ತಾತನ ಪಾತ್ರ ಅನಂತ್ ನಾಗ್ ಅವರು ಮಾಡುತ್ತಾರೆ ಎಂದರು. ಈ ರೀತಿಯ ಪಾತ್ರ ಕೇವಲ ಅನಂತ್ ನಾಗ್ ಸರ್ ಅವರಿಂದ ಮಾತ್ರ ಮಾಡಲು ಸಾಧ್ಯ. ನಾನು ಅವರ ಜೊತೆಗೆ ಸಾಕಷ್ಟು ಚಿತ್ರದಲ್ಲಿ ಅಭಿನಯಿಸಿದ್ದೇನೆ. ಈ ಚಿತ್ರವೂ ಖುಷಿ ಕೊಟ್ಟಿದೆ ಎಂದು ಸಂತಸ ಹಂಚಿಕೊಂಡರು.
ದಿಗಂತ್ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರೂ ಕೂಡ ಈ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಎಲ್ಲರ ಗಮನ ಸೆಳೆಯಿತು. ದಿಗಂತ್ ಜೋಡಿಯಾಗಿ ಶುಭ್ರ ಅಯ್ಯಪ್ಪ ಹಾಗು ಐಂದ್ರಿತಾ ರೇ ಸೇರಿದಂತೆ ವಿನೀತ್, ಪ್ರಕಾಶ್ ತುಮ್ಮಿನಾಡು, ಸುನೀಲ್, ವೆಂಕಟೇಶ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.