ಚೆನ್ನೈ(ತಮಿಳುನಾಡು): ಮಲಯಾಳಂ ಚಿತ್ರನಟಿ ನಯನತಾರಾ ಮತ್ತು ತಮಿಳಿನ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿಗೆ ಅವಳಿ ಗಂಡು ಮಗು ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಬಾಡಿಗೆ ತಾಯ್ತನ ವಿವಾದದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆರೋಗ್ಯ ಸಚಿವರು ಹೇಳಿದ್ದು, ತನಿಖಾ ಸಮಿತಿಯನ್ನೂ ರಚಿಸಿದ್ದರು. ಈಗ ಈ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ತಮಿಳುನಾಡು ಆರೋಗ್ಯ ಇಲಾಖೆ ರಚಿಸಿರುವ ತನಿಖಾ ಸಮಿತಿ ಪ್ರಕಾರ, ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ಬಾಡಿಗೆ ತಾಯ್ತನ ಕಾನೂನುಬದ್ಧವಾಗಿದೆ. ಆಗಸ್ಟ್ 2021ರಲ್ಲಿ ದಂಪತಿ ಬಾಡಿಗೆ ತಾಯ್ತನ ಪ್ರಕ್ರಿಯೆ ಪ್ರಾರಂಭಿಸಿದ್ದರು ಮತ್ತು ಅದೇ ವರ್ಷದ ನವೆಂಬರ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
2016ರ ಮಾರ್ಚ್ 11ರಂದು (ರಿಜಿಸ್ಟ್ರಾರ್ ಪದ್ಧತಿಯಡಿ) ತಮ್ಮ ವಿವಾಹ ನಡೆದಿದೆ ಎಂದು ನಯನ ಮತ್ತು ವಿಘ್ನೇಶ್ ಅಫಿಡವಿಟ್ ಸಲ್ಲಿಸಿದ್ದಾರೆ. ಎಲ್ಲ ನಿಯಮಗಳನ್ನೂ ಪಾಲಿಸಲಾಗಿದೆ. ಆದ್ರೆ, ಬಾಡಿಗೆ ತಾಯ್ತನದ ವಿಧಾನವನ್ನೇಕೆ ಆಯ್ಕೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.
ಬಾಡಿಗೆ ತಾಯ್ತನಕ್ಕೆ ನಿಯಮಗಳೇನು?: ಈ ವರ್ಷದ ಜನವರಿಯಲ್ಲಿ ಭಾರತದಲ್ಲಿ ಬಾಡಿಗೆ ತಾಯ್ತನವನ್ನು ನಿಷೇಧಿಸಲಾಗಿದೆ. ಅದೂ ಅಲ್ಲದೇ ಇಬ್ಬರಲ್ಲಿ ಒಬ್ಬರಿಗೆ ಮಗು ಹೆರುವ ಸಾಮರ್ಥ್ಯವಿಲ್ಲದಿದ್ದರೆ ಮದುವೆಯಾದ 5 ವರ್ಷಗಳ ನಂತರವೇ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಬಹುದು ಎಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ 37ರ ಹರೆಯದ ನಯನತಾರಾ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಹೆರಲು ಅರ್ಹರಲ್ಲವೇ ಎಂಬ ಚರ್ಚೆ ನಡೆಯುತ್ತಿದೆ.
ನಯನತಾರಾಗೆ ಸಚಿವರು ಸೂಚಿಸಿದ್ದೇನು?:ನಯನತಾರಾ ಬಾಡಿಗೆ ತಾಯ್ತನ ವಿವಾದದ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಆರೋಗ್ಯ ಸಚಿವರು, ಬಾಡಿಗೆ ತಾಯ್ತನವನ್ನು ಕಾನೂನುಬದ್ಧವಾಗಿ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಆರೋಗ್ಯ ಇಲಾಖೆ ವಿಚಾರಣೆ ನಡೆಸಲಿದೆ. ಬಾಡಿಗೆ ತಾಯ್ತನದ ಅವಕಾಶವು ಮಕ್ಕಳನ್ನು ಹೊಂದಲು ಸಾಧ್ಯವಾಗದಂತಹ ಕೆಲವು ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಈ ಬಗ್ಗೆ ವಿವರಗಳನ್ನು ಸರ್ಕಾರಕ್ಕೆ ತಿಳಿಸುವಂತೆ ಸಚಿವ ಸುಬ್ರಮಣಿಯನ್ ಅವರು ನಯನತಾರಾಗೆ ಸೂಚಿಸಿದ್ದರು.
ಸುಮಾರು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಈ ವರ್ಷ ಜೂನ್ನಲ್ಲಿ ಮದುವೆಯಾಗಿದ್ದರು. ಅಕ್ಟೋಬರ್ 9 ರಂದು ಅವಳಿ ಗಂಡು ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದರು. ಮದುವೆಯಾದ ನಾಲ್ಕೇ ತಿಂಗಳಲ್ಲಿ ಬಾಡಿಗೆ ತಾಯ್ತನ ಹೇಗೆ ಸಾಧ್ಯ ಎಂದು ಹಲವು ನೆಟಿಜನ್‌ಗಳು ಚರ್ಚಿಸಿದ್ದರು. ಭಾರತದಲ್ಲಿ ಬಾಡಿಗೆ ತಾಯ್ತನ ಪದ್ಧತಿ ನಿಷೇಧವಿದೆ. ಹಾಗಾಗಿ ಹೇಗೆ ಮಕ್ಕಳಾದವು ಎಂದು ಕೇಳಿದ್ದರು. ವಿವಾದದ ನಡುವೆ ತಮಿಳುನಾಡು ಸರ್ಕಾರ ತನಿಖಾ ಸಮಿತಿ ರಚಿಸಿತ್ತು.
ಇದನ್ನೂ ಓದಿ:ಮದುವೆ ಮುನ್ನ ಮಕ್ಕಳ ಪ್ಲಾನ್.. ಸರೋಗಸಿ ಮೂಲಕ ಅವಳಿ ಶಿಶುಗಳಿಗೆ ಅಪ್ಪ-ಅಮ್ಮನಾದ ನಯನತಾರ-ವಿಘ್ನೇಶ್