ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಆ್ಯಕ್ಷನ್ ಕಟ್ ಹೇಳಿರುವ ಬಹುನಿರೀಕ್ಷಿತ ಚಿತ್ರ ದಿ ವ್ಯಾಕ್ಸಿನ್ ವಾರ್ ಇಂದು (ಸೆಪ್ಟೆಂಬರ್ 28) ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ದಿ ವ್ಯಾಕ್ಸಿನ್ ವಾರ್ ಚಿತ್ರದ ಜೊತೆಗೆ ಕಂಗನಾ ರಣಾವತ್ ಅವರ ಚಂದ್ರಮುಖಿ 2, ಸ್ಕಂದ ಮತ್ತು ಕಾಮಿಡಿ ಚಿತ್ರ ಫುಕ್ರೆ 3 ಸಹ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ದಕ್ಷಿಣ, ಉತ್ತರ ಚಿತ್ರರಂಗದ ಹಲವು ಸಿನಿಮಾಗಳು ಇಂದು ತೆರೆಕಂಡಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿವೆ.
ವಿವೇಕ್ ಅಗ್ನಿಹೋತ್ರಿ ಅವರ ಬಹುನಿರೀಕ್ಷಿತ ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ X (ಹಿಂದಿನ ಟ್ವಿಟರ್) ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ಮೊದಲ ದಿನದ ಫಸ್ಟ್ ಶೋ ನೋಡಿದೆ, ಅದ್ಭುತ ಸಿನಿಮಾ. ವಾಸ್ತವ ವಿಷಯವನ್ನು ತೆರೆ ಮೇಲೆ ತೋರಿಸಲಾಗಿದೆ. ಕೋವಿಡ್ 19 ನಂತಹ ಕಠಿಣ ಸಂದರ್ಭ ನೆರವಿನ ಹಸ್ತ ಚಾಚಿದ ನಮ್ಮ ವಿಜ್ಞಾನಿಗಳು, ವೈದ್ಯರು, ಆರೋಗ್ಯ ಕಾರ್ಯಕರ್ತರು, ಸೇರಿದಂತೆ ಎಲ್ಲರಿಗೂ ನಮನ ಎಂದು ಓರ್ವರು ಬರೆದಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ಜಾಗೃತಿ ಯುದ್ಧ, ಈ ಸಿನಿಮಾ ದೇಶಭಕ್ತಿಯನ್ನು ತೋರಿಸುತ್ತದೆ ಎಂದು ಮತ್ತೋರ್ವರು ತಿಳಿಸಿದ್ದಾರೆ.
ಬಾಲಿವುಡ್ನ ಖ್ಯಾತ ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೇವಲ 10 ಕೋಟಿ ರೂ. ಬಜೆಟ್‌ನಲ್ಲಿ ದಿ ವ್ಯಾಕ್ಸಿನ್ ವಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಚಿತ್ರದ ಮೊದಲ ದಿನದ ಗಳಿಕೆ ಬಗ್ಗೆ ಹೇಳುವುದಾದರೆ, ಬಾಕ್ಸ್ ಆಫೀಸ್ನಲ್ಲಿ 2 ಕೋಟಿ ರೂಪಾಯಿ ವ್ಯವಹಾರ ನಡೆಸಲಿದೆ ಎಂದು ಸಿನಿ ಪಂಡಿತರು ಅಂದಾಜಿಸಿದ್ದಾರೆ.