2023ರ ಬಹುನಿರೀಕ್ಷಿತ 'ದಿ ವ್ಯಾಕ್ಸಿನ್ ವಾರ್' ಚಿತ್ರ ಸೆಪ್ಟೆಂಬರ್ 28ರಂದು ತೆರೆ ಕಂಡು ಉತ್ತಮ ಪ್ರದರ್ಶನ ಮುಂದುವರೆಸಿದೆ. ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಪಡೆಯುತ್ತಿದೆ. ಈ ಮೂಲಕ ಭಾರತೀಯ ವಿಜ್ಞಾನಿಗಳ ಅಸಾಧಾರಣ ಸಾಧನೆ ಗುರುತಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಭಿನಂದಿಸಿದರು.
ಜೋಧ್ಪುರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ದಿ ವ್ಯಾಕ್ಸಿನ್ ವಾರ್ ಎಂಬ ಚಿತ್ರ ಬಂದಿದೆ ಎಂದು ನಾನು ಕೇಳಿದ್ದೇನೆ. ನಮ್ಮ ದೇಶದ ವಿಜ್ಞಾನಿಗಳು ಕೋವಿಡ್ ವಿರುದ್ಧ ಹೋರಾಡಲು ಹಗಲಿರುಳು ಶ್ರಮಿಸಿದರು. ಅವರು ಪ್ರಯೋಗಾಲಯದಲ್ಲಿ ಋಷಿಯಂತೆ ಧ್ಯಾನ ಮಾಡಿದರು. ಈ ಎಲ್ಲಾ ವಿಷಯಗಳನ್ನು ಆ ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಸಿನಿಮಾವನ್ನು ನಿರ್ಮಿಸುವ ಮೂಲಕ ವಿಜ್ಞಾನಿಗಳು ಮತ್ತು ವಿಜ್ಞಾನಕ್ಕೆ ಪ್ರಾಮುಖ್ಯತೆ ನೀಡಿದ ಈ ಚಿತ್ರದ ನಿರ್ದೇಶಕರನ್ನು ಅಭಿನಂದಿಸುತ್ತೇನೆ" ಎಂದು ಹೇಳಿದ್ದಾರೆ.
ಸಂತಸ ವ್ಯಕ್ತಪಡಿಸಿದ ಅಗ್ನಿಹೋತ್ರಿ:ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿಗೆ ನಿರ್ದೇಶಕ ಅಗ್ನಿಹೋತ್ರಿ ಧನ್ಯವಾದ ತಿಳಿಸಿದ್ದಾರೆ. ಎಕ್ಸ್ನಲ್ಲಿ ಪ್ರಧಾನಿ ಭಾಷಣದ ವಿಡಿಯೋವನ್ನು ಹಂಚಿಕೊಂಡಿರುವ ಅವರು, "ಪ್ರಧಾನಿ ಮೋದಿಯವರಿಂದ ಇಂತಹ ಮಾತು ಕೇಳಲು ಸಂತೋಷವಾಗಿದೆ. ಅವರ ನಾಯಕತ್ವದಲ್ಲಿ ಲಸಿಕೆಯನ್ನು ತಯಾರಿಸುವಲ್ಲಿ ಭಾರತೀಯ ವಿಜ್ಞಾನಿಗಳು, ಪ್ರಮುಖವಾಗಿ ಮಹಿಳಾ ವಿಜ್ಞಾನಿಗಳ ಕೊಡುಗೆಯನ್ನು ನಾನು ಗುರುತಿಸಿದ್ದೇನೆ. ತಮ್ಮ ಶ್ರಮವನ್ನು ಪ್ರಧಾನಿ ಮೋದಿಯವರು ಕೊಂಡಾಡಿದ್ದಕ್ಕಾಗಿ ಮಹಿಳಾ ವಿಜ್ಞಾನಿಗಳು ನನಗೆ ಕರೆ ಮಾಡಿ ಭಾವುಕರಾದರು" ಎಂದು ಹೇಳಿದ್ದಾರೆ.