ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಗ್ಲಾಮರ್ ಪಾತ್ರಗಳ ಮೂಲಕ ಫೇಮಸ್ ಆಗಿರುವ ನಟಿ ಎಸ್ತರ್ ನರೋನ್ಹಾ ನಿರ್ದೇಶಕಿಯಾಗಿ ಬಡ್ತಿ ಪಡೆದಿರುವುದು ಗೊತ್ತೇ ಇದೆ. ನಾವಿಕ, ಅತಿರಥ, ನುಗ್ಗೇಕಾಯಿ, ಲೋಕಲ್ ಟ್ರೈನ್, ಲಂಕೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ಬ್ಯೂಟಿ, 'ದಿ ವೆಕೆಂಟ್ ಹೌಸ್' ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ನಿರ್ದೇಶನದ ಜೊತೆ ಜೊತೆಗೆ ನಿರ್ಮಾಣ, ಸಂಗೀತ ನಿರ್ದೇಶನ, ನಟನೆ ಜವಾಬ್ದಾರಿಯನ್ನು ಕೂಡ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನರೋನ್ಹಾ ಹೊಸ ಕನಸೊಂದು ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಈ ಬಗ್ಗೆ ಚಿತ್ರತಂಡ ಕೆಲ ಮಾಹಿತಿಗಳನ್ನು ಹಂಚಿಕೊಂಡಿದೆ.
ಮೊದಲಿಗೆ ಮಾತನಾಡಿದ ನಟಿ ಕಮ್ ನಿರ್ದೇಶಕಿ ಎಸ್ತರ್ ನರೋನ್ಹಾ, "ದಿ ವೆಕೆಂಟ್ ಹೌಸ್' ಹಾರರ್ ಸಿನಿಮಾವಲ್ಲ. ಇದೊಂದು ಖಾಲಿ ಮನೆ ಸುತ್ತ ಸಾಗುವ ಕಥೆ. ಈಗಿನ ಯೂತ್ಗೆ ಬಹಳ ಕನೆಕ್ಟ್ ಆಗುವ ಸಿನಿಮಾವಿದು. ಪ್ರೀತಿ ಮತ್ತು ಎಮೋಷನ್ ಎರಡನ್ನು ಸೇರಿಸಿ ಹೆಣೆದ ಕಥೆ. ಡೈರೆಕ್ಷನ್ ಮಾಡಿದ್ದು ಖುಷಿ ಅನಿಸಿತು. ನನ್ನ ವಿಷನ್ ಅನ್ನು ನಾನು ಓಪನ್ ಆಗಿ ಹೇಳುವ ಸ್ವಾತಂತ್ರ್ಯ ನನ್ನ ಸಿನಿಮಾದಲ್ಲಿ ಸಿಕ್ಕಿದೆ. ನಾನು ಎಂಟು ವರ್ಷದಿಂದ ಸಿಂಗರ್. ನಾನು ರಂಗಭೂಮಿಗೆ ಬಂದಿದ್ದು ಸಿಂಗರ್ ಆಗಿಯೇ. ಹೀಗಾಗಿ ಈ ಚಿತ್ರದಲ್ಲಿ ನಾನೇ ಸಂಗೀತ ನಿರ್ದೇಶಕಿಯಾಗಿಯೂ ಜವಾಬ್ದಾರಿ ನಿಭಾಯಿಸಿದ್ದೇನೆ. ಇದು ನೈಜ ಘಟನೆಯಾಧಾರಿತ ಚಿತ್ರವಲ್ಲ. ಸಿನಿಮಾ 1 ಗಂಟೆ 40 ನಿಮಿಷ ಮಾತ್ರ ಇದೆ. ಎಲ್ಲಿಯೂ ಬೋರ್ ಹೊಡೆಸಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು, 'ದಿ ವೆಕೆಂಟ್ ಹೌಸ್' ಸಿನಿಮಾದ ಸ್ಯಾಂಪಲ್ಸ್ ಈಗಾಗಲೇ ಭಾರಿ ಸದ್ದು ಮಾಡುತ್ತಿವೆ. ಹಾಡುಗಳು, ಟೀಸರ್ ಗಮನ ಸೆಳೆಯುತ್ತಿದೆ. ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಮೂಡಿಬಂದಿರುವ ಚಿತ್ರಕ್ಕೆ ನರೇಂದ್ರ ಗೌಡ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನವಿದೆ. 'ದಿ ವೆಕೆಂಟ್ ಹೌಸ್' ಸಿನಿಮಾವನ್ನು ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಖಾಲಿ ಮನೆಯ ಸುತ್ತ ನಡೆಯುವ ಘಟನೆ ಆಧಾರಿತ ಸಿನಿಮಾವಿದು.