ಬೆಂಗಳೂರು: ನಟ ಅಜಯ್ ದೇವಗನ್ ಈಗಾಗಲೇ ಒಟಿಟಿಯ ಸಿರೀಸ್ನಲ್ಲಿ ಮಿಂಚುತ್ತಿದ್ದಾರೆ. ಈ ನಡುವೆ ನಟಿ ಕಾಜೋಲ್ ಕೂಡ ಇದೇ ಮೊದಲ ಬಾರಿಗೆ ಹೊಸ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ದಿ ಟ್ರಯಲ್ - ಪ್ಯಾರ್. ಕೂನ್. ದೋಖಾ ಒಟಿಟಿ ವೆಬ್ ಸಿರೀಸ್ನಲ್ಲಿ ಇದೇ ಪ್ರಥಮ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ದಿ ಟ್ರಯಲ್ ವೆಬ್ ಸಿರೀಸ್ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದ್ದು, ಇದರಲ್ಲಿ ವಕೀಲೆ ಪಾತ್ರಕ್ಕೆ ನಟಿ ಕಾಜೋಲ್ ಬಣ್ಣ ಹಚ್ಚಲಿದ್ದಾರೆ. ನೊವೊನಿಕಾ ಸೇನ್ ಗುಪ್ತಾ ಆಗಿ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿ ಕಾಜೋಲ್ ಮದುವೆಯಾದ ಬಳಿಕ ವಕೀಲಿ ವೃತ್ತಿ ತೊರೆದಿರುತ್ತಾರೆ. ತಮ್ಮ ಗಂಡ ಸಾರ್ವಜನಿಕ ಹಗರಣ ಸಂಬಂಧ ಜೈಲು ಸೇರಿದಾಗ ಮತ್ತೆ ವಕೀಲಿ ವೃತ್ತಿ ಆರಂಭಿಸುವ ಕಥೆಯನ್ನು ಈ ಚಿತ್ರ ಹೊಂದಿದೆ.
ವೈವಾಹಿಕ ಜೀವನದಲ್ಲಿ ಗಂಡನಿಂದ ಮೋಸ ಹೋಗುವುದರಿಂದ ಈ ಚಿತ್ರದ ಟೀಸರ್ ಆರಂಭವಾಗುತ್ತದೆ. ನೊವೊನಿಕಾ ಗಂಡ ಜಿಶು ಸೇನ್ಗುಪ್ತಾ ಎರಡನೇ ಜಡ್ಜ್ ಆಗಿದ್ದು, ಲಂಚದ ರೂಪದಲ್ಲಿ ಲೈಂಗಿಕವಾಗಿ ತಮ್ಮ ಕಕ್ಷಿದಾರರ ಬಳಕೆ ಮಾಡುತ್ತಿರುತ್ತಾರೆ. ಆತನನ್ನು ಬಂಧಿಸುವ ಪೊಲೀಸರು ಜೈಲಿಗೆ ಅಟ್ಟುತ್ತಾರೆ. ಇದರಿಂದಾಗಿ ಒಬ್ಬಂಟಿಯಾದ ಕಾಜೋಲ್ ಮಕ್ಕಳ ಭವಿಷ್ಯ ಮತ್ತು ಕುಟುಂಬ ಉಳಿಸಿಕೊಳ್ಳಲು ಜ್ಯೂನಿಯರ್ ವಕೀಲೆಯಾಗಿ ವೃತ್ತಿ ಆರಂಭಿಸುತ್ತಾರೆ. ಹಲವು ವರ್ಷಗಳ ಬಳಿಕ ನ್ಯಾಯಾಲಯದ ಕೊಠಡಿ ಪ್ರವೇಶಿಸುವ ಆಕೆ ಕಡೆಗೆ ತನ್ನ ಗಂಡನ ಮನವಿ ಮೇರೆಗೆ ಹೇಗೆ ಆತನ ಪ್ರಕರಣವನ್ನು ನಡೆಸುತ್ತಾಳೆ ಎಂಬುದು ಈ ವೆಬ್ ಸೀರಿಸ್ ಕಥಾ ಹಂದರವಾಗಿದೆ.
ಇನ್ನು ಈ ವೆಬ್ ಸಿರೀಸ್ ಟೀಸರ್ ಬಿಡುಗಡೆಗೆ ಮುನ್ನ ನಟಿ ಕಾಜೋಲ್ ತಮ್ಮ ಸಾಮಾಜಿಕ ಜಾಲತಾಣಗಳಿಂದ ಹೊರ ಬಂದಿದ್ದು, ಸಾಕಷ್ಟು ಈ ಕುರಿತು ಟೀಕೆಗಳನ್ನು ಎದುರಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡಿರುವ ಅವರು, ನನ್ನ ಜೀವನದ ಕಷ್ಟವಾದ ಟ್ರಯಲ್ ಎದುರಾಗಿದೆ ಎಂದು ಬರೆದಿದ್ದಾರೆ. ಯಾವ ಉದ್ದೇಶದಿಂದ ದೂರ ಉಳಿಯುತ್ತಿರುವುದಾಗಿ ಬಹಿರಂಗ ಪಡಿಸಿಲ್ಲ. ಇದರಿಂದ ಅವರ ಅಭಿಮಾನಿಗಳಿಂದ ಸಾಕಷ್ಟು ಪರ ಮತ್ತು ವಿರೋಧದ ಟೀಕೆಗಳನ್ನು ಎದುರಿಸಿದರು.