ಚೆನ್ನೈ: ಜಿಎಸ್ಟಿ ಪಾವತಿ ಸಂಬಂಧ ಖ್ಯಾತ ಸಂಗೀತ ಸಂಯೋಜಕರಾಗಿರುವ ಎಆರ್ ರೆಹಮಾನ್ ಮತ್ತು ಜಿವಿ ಪ್ರಕಾಶ್ ಕುಮಾರ್ ಮತ್ತು ಸಿಆರ್ ಸಂತೋಷ್ ನಾರಾಯಣನ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಮಾಡಿದೆ. 2013 ರಿಂದ 2017ರವರೆಗೆ ಎ ಆರ್ ರೆಹಮಾಸ್ ಜಿಎಸ್ಟಿ ತೆರಿಗೆ ಪಾವತಿ ಮಾಡಿಲ್ಲ ಎಂದು ಆರೋಪಿಸಿ ಜಿಎಸ್ಟಿ ಆಯುಕ್ತರು, ಸಂಗೀತ ಮಾಂತ್ರಿಕನಿಗೆ ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಎಆರ್ ರಹಮಾನ್ ಸೇರಿದಂತೆ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ವಜಾಗೊಳಿಸಿದೆ.
ನ್ಯಾಯಮೂರ್ತಿ ಅನಿತಾ ಸುಮಂತ್ ಅವರು, ದಂಡದೊಂದಿಗೆ ತೆರಿಗೆಯ ಬೇಡಿಕೆಯನ್ನು ಪ್ರಶ್ನಿಸಿ ನಾಲ್ಕು ವಾರಗಳಲ್ಲಿ ಸ್ಟಟ್ಯೂಟರಿ ಮನವಿಯನ್ನು ಸಲ್ಲಿಸಬಹುದು ಎಂಬ ಅವಕಾಶವನ್ನು ನೀಡಲಾಗಿದೆ ಎಂದಿದ್ದಾರೆ.
ಏನಿದು ಪ್ರಕರಣ: ಸಂಗೀತ ಸಂಯೋಜಕರಾಗಿರುವ ಎಆರ್ ರೆಹಮಾನ್ ಅವರು 2013ರಿಂದ 2017ರವರೆಗೆ ತಮ್ಮ ಸಂಗೀತ ಕಾರ್ಯಕ್ಕೆ ಮೂರು ಕಂಪನಿಗಳೊಂದಿಗೆ ಸಹಿ ಹಾಕಿದ್ದು, ಈ ಸಂಬಂಧ ಸೇವಾ ತೆರಿಗೆಯನ್ನು ಪಾವತಿಸಿಲ್ಲ ಎಂದು ಜಿಎಸ್ಟಿ ಆಯುಕ್ತರು ನೋಟಿಸ್ ಜಾರಿ ಮಾಡಿದ್ದರು. ಈ ಸಂಬಂಧ ಮದ್ರಾಸ್ ಹೈ ಕೋರ್ಟ್ಗೆ ಜಿಎಸ್ಟಿ ಆಯುಕ್ತರು ಮನವಿ ಅರ್ಜಿಯನ್ನು ಸಲ್ಲಿಸಿದ್ದರು. ಅಲ್ಲದೇ, ಈ ವೇಳೆ ತೆರಿಗೆ ವಂಚನೆ ಮಾಡಿರುವ ಪುರಾವೆಗಳ ಆಧಾರದ ಮೇಲೆ ಎಆರ್ ರೆಹಮಾನ್ ಅವರಿಗೆ ನೋಟಿಸ್ ನೀಡಲಾಗಿದ್ದು, ಮಾನಹಾನಿ ಮಾಡುವ ಉದ್ದೇಶ ಇಲ್ಲ ಎಂದು ತಿಳಿಸಿದ್ದರು. ಇನ್ನು ಇದೇ ವೇಳೆ, ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಕುಮಾರ್ ಕೂಡ 1 ಕೋಟಿ 84 ಲಕ್ಷ ಸೇವಾ ತೆರಿಗೆ ಕಟ್ಟುವ ಸಂಬಂಧ ಜಿಎಸ್ಟಿ ಆಯುಕ್ತರು ನೀಡಿದ್ದ ನೋಟಿಸ್ ವಿರುದ್ಧ ಅರ್ಜಿಯನ್ನು ಸಲ್ಲಿಸಿದ್ದರು.