ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ 'ಕೆಜಿಎಫ್' ಬಳಿಕ ಇದೀಗ ಹತ್ತು ಹಲವು ಸಿನಿಮಾಗಳಿಗೆ ರೆಕ್ಕೆಪುಕ್ಕ ಬಂದಿವೆ. ಮಾಸ್ ಮತ್ತು ಕ್ಲಾಸ್ ಜೊತೆಗೆ ಸಖತ್ ಮನರಂಜನೆ ಹೊತ್ತು ಬರುತ್ತಿರುವ ಇತ್ತೀಚಿನ ಕನ್ನಡದ ಚಿತ್ರಗಳು ರಾಜ್ಯದಿಂದ ರಾಜ್ಯಕ್ಕೆ ದೇಶದಿಂದ ದೇಶಕ್ಕೆ ಹಾರಲಾಂಭಿಸಿವೆ. 'ಕಾಂತಾರ' ಚಿತ್ರ ಕೂಡ ಇದಕ್ಕೊಂದು ಉತ್ತಮ ಉದಾಹರಣೆ.
ಈ ಸಿನಿಮಾಗಳ ಜಾಡು ಹಿಡಿದುಕೊಂಡೇ ಇದೀಗ ಹಲವು ಸಿನಿಮಾಗಳು ಬಿಡುಗಡೆಯ ಸಿದ್ಧತೆಯಲ್ಲಿವೆ. ಪ್ರಪಂಚದ ಸಿನಿ ಮಾರುಕಟ್ಟೆಯಲ್ಲಿ ಕನ್ನಡ ಸಿನಿಮಾಗಳಿಗೂ ಬೇಡಿಕೆ ಹೆಚ್ಚಾಗಿದ್ದು ಎಲ್ಲರ ಕಣ್ಣುಗಳು ಇತ್ತ ಕಡೆ ನೆಟ್ಟಿವೆ. ಒಂದು ಕಾಲದಲ್ಲಿ ಭಾರತೀಯ ಸಿನಿಮಾ ಅಂದ್ರೆ ಅದು ಕೇವಲ ಬಾಲಿವುಡ್ ಮಾತ್ರವೆಂಬಂತಾಗಿತ್ತು. ಇದೀಗ ಆ ಪರಿಸ್ಥಿತಿ ಬದಲಾಗಿದೆ. ಪ್ರಾದೇಶಿಕ ಭಾಷೆಗಳಲ್ಲಿಯೂ ಅದ್ಧೂರಿ ಸಿನಿಮಾಗಳು ಹುಟ್ಟತೊಡಗಿವೆ. ಈ ನಿಟ್ಟಿನಲ್ಲಿ 'ಬಾಹುಬಲಿ' ಚಿತ್ರ ಕೂಡ ಒಂದು. ಅಲ್ಲಿಂದ ಆರಂಭವಾದ ಪ್ರಾದೇಶಿಕ ಭಾಷಾ ಸಿನಿಮಾ ಇದೀಗ ರಿಷಬ್ ಶೆಟ್ಟಿ ನಟನೆಯ 'ಕಾಂತಾರ' ಚಿತ್ರದವರೆಗೂ ಸಾಗಿಬಂದಿದೆ.
'ಬಾಹುಬಲಿ' ತೆಲುಗಿನ ರೇಂಜ್ ಅನ್ನು ಹೇಗೆ ಬದಲಾಯಿಸಿದೆಯೋ ಹಾಗೆಯೇ 'ಕೆಜಿಎಫ್' ಕೂಡ ಕನ್ನಡ ಸಿನಿಮಾಗಳಿಗೆ ಅದನ್ನೇ ಮಾಡಿತು ಅನ್ನೋದರಲ್ಲಿ ಎರಡು ಮಾತಿಲ್ಲ. ಇದರ ಬೆನ್ನಲ್ಲೇ ಬಂದ 'ಕಾಂತಾರ' ಕೂಡಾ ಹೊಸ ಹೊಳಪು ತಂದುಕೊಟ್ಟಿತು. ಈ ಚಿತ್ರಗಳ ಬಳಿಕ ಒಂದಾದ ಮೇಲೊಂದರಂತೆ ಕನ್ನಡ ಚಿತ್ರಗಳಿಗೆ ಬೆಲೆ ಹೆಚ್ಚಾಗುತ್ತಾ ಹೋಗುತ್ತಿದೆ. ಇದೇ ಅವಕಾಶವನ್ನು ಬಂಡವಾಳ ಮಾಡಿಕೊಂಡಿರುವ ಹಲವು ಕನ್ನಡದ ಹಲವು ಚಿತ್ರಗಳು ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲು ಸಿದ್ಧತೆ ನಡೆಸಿವೆ.
ಶಿವರಾಜ್ ಕುಮಾರ್ ನಟನೆಯ ಹೆಸರಿಡದ ಆ್ಯಕ್ಷನ್ ಥ್ರಿಲ್ಲರ್ ಚಿತ್ರವೊಂದು ಅದೇ ಹಾದಿಯಲ್ಲಿದೆ. ಈ ಚಿತ್ರವನ್ನು ಕಾರ್ತಿಕ್ ಅದ್ವೈತ್ ನಿರ್ದೇಶಿಸುತ್ತಿದ್ದು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಆಲೋಚನೆ ಇಟ್ಟುಕೊಂಡಿದ್ದಾರೆ. ಶೂಟಿಂಗ್ ಮುಂದಿನ ವರ್ಷ ಆರಂಭವಾಗಲಿದೆ. ಸುಧೀರ್ ಚಂದ್ರ ಪಾಟೀರಿ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ.
ಅಭಿಷೇಕ್ ಅಂಬರೀಶ್ ನಟನೆಯ ಚಿತ್ರದ ಪೋಸ್ಟರ್ 'AA04' ಕನ್ನಡದಿಂದ ಮುಂಬರುವ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ. ಅಭಿಷೇಕ್ ಅಂಬರೀಶ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಆ್ಯಕ್ಷನ್ ಎಂಟರ್ ಟೈನರ್ನಲ್ಲಿ ತಯಾರಾಗುತ್ತಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಪಕರಾಗಿದ್ದಾರೆ. ರಾಘವೇಂದ್ರ ವಿ ಗಾಯನ ಸಂಯೋಜಿಸುತ್ತಿದ್ದಾರೆ.
ಶಿವರಾಜ್ ಕುಮಾರ್ ನಟನೆಯ ಮತ್ತೊಂದು ಚಿತ್ರ 'ವೇದ' ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ನಾಯಕಿಯಾಗಿ ಗಾನವಿ ಲಖಂ ನಟಿಸುತ್ತಿದ್ದಾರೆ. ಉಮಾಶ್ರೀ, ಅದಿತಿ ಸಾಗರ್, ರಘು ಶಿವಮೊಗ್ಗ, ಜಗ್ಗಪ್ಪ, ಚೆಲುವರಾಜ್, ಭರತ್ ಸಾಗರ್, ಪ್ರಸನ್ನ, ವಿನಯ್, ಸಂಜೀವ್ ಮುಂತಾದವರು ತಾರಾಗಣದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಮತ್ತು ಜೀ ಸ್ಟುಡಿಯೋಸ್ ಜಂಟಿಯಾಗಿ ಚಿತ್ರ ನಿರ್ಮಿಸುತ್ತಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಪೋಸ್ಟರ್ ಕನ್ನಡದಿಂದ ಹೊರಬರುತ್ತಿರುವ ಇನ್ನೊಂದು ಬಹುನಿರೀಕ್ಷಿತ ಚಿತ್ರ ‘ಸಪ್ತ ಸಾಗರದಾಚೆ ಎಲ್ಲೋ’. ಈ ರೋಮ್ಯಾಂಟಿಕ್ ಡ್ರಾಮಾವನ್ನು ಹೇಮಂತ್ ಎಂ ರಾವ್ ನಿರ್ದೇಶಿಸುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚರಣ್ ರಾಜ್ ಸಂಗೀತವಿದೆ. ಪುಷ್ಕರ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ದೇಶಿಸುತ್ತಿದ್ದಾರೆ.18 ನವೆಂಬರ್ 2022 ರಂದು ಚಿತ್ರ ಬಿಡುಗಡೆಯಾಗಲು ಸಿದ್ಧವಾಗಿದೆ.
ಮಾರ್ಟಿನ್ ಚಿತ್ರದ ಪೋಸ್ಟರ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಕೂಡ ಹೆಚ್ಚು ಭರವಸೆ ಮೂಡಿಸಿರುವ ಚಿತ್ರಗಳಲ್ಲೊಂದು. ಇದೊಂದು ಆ್ಯಕ್ಷನ್ ಮತ್ತು ಸಾಹಸಮಯ ಚಿತ್ರವಾಗಿದ್ದು ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಎ ಪಿ ಅರ್ಜುನ್ ನಿರ್ದೇಶನವಿದೆ. ಮೆಲೋಡಿ ಬ್ರಹ್ಮ ಮಣಿಶರ್ಮಾ ಅವರ ಸಂಗೀತ ಸಂಯೋಜನೆ ಇರಲಿದೆ. ಉದಯ್ ಕೆ ಮೆಹ್ತಾ ನಿರ್ಮಿಸುತ್ತಿದ್ದಾರೆ. ಚಿತ್ರವು 18 ನವೆಂಬರ್ 2022 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ.
ಉಪೇಂದ್ರ ಮತ್ತು ಸುದೀಪ್ ನಟನೆಯ 'ಕಬ್ಜ' ಕೂಡ ಭಾರತೀಯ ಚಿತ್ರರಂಗದಲ್ಲಿ ಬೇಜಾನ್ ಟಾಕ್ ಆಗುತ್ತಿದೆ. ಆರ್ ಚಂದ್ರು ನಿರ್ದೇಶಿಸುತ್ತಿದ್ದಾರೆ. ಶ್ರಿಯಾ ಸರನ್ ಮತ್ತು ಮುರಳಿ ಶರ್ಮಾ ಪ್ರಮುಖ ಪಾತ್ರಗಳಲ್ಲಿದ್ದಾರೆ. 25ನೇ ಡಿಸೆಂಬರ್ 2022 ರಂದು ಬಿಡುಗಡೆಯಾಗಲಿದೆ. ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದು ಎ ಜೆ ಶೆಟ್ಟಿ ಛಾಯಾಗ್ರಹಣ ನೀಡಿದ್ದಾರೆ.
ಬಿಲ್ಲ ರಂಗ ಬಾಷಾ ಚಿತ್ರದ ಪೋಸ್ಟರ್ ಕಿಚ್ಚ ಸುದೀಪ್ ಅಭಿನಯದ 'ಬಿಲ್ಲ ರಂಗ ಬಾಷಾ' ಕೂಡ ಹೆಚ್ಚು ಚರ್ಚಿತ ಚಿತ್ರ. ವಿಕ್ರಾಂತ್ ರೋಣ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಅನುಪ್ ಭಂಡಾರಿ ಅವರೇ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಇದಲ್ಲದೇ ಹಲವು ಸಿನಿಮಾಗಳಿಗೆ ಸಹಿ ಹಾಖಿರುವ ಸುದೀಪ್ ಯಾವ ಚಿತ್ರಕ್ಕೆ ಒಕೆ ಹೇಳಲಿದ್ದಾರೆ ಅನ್ನೋದನ್ನು ಕಾದುನೋಡಬೇಕು.
ದರ್ಶನ್ ನಟನೆಯ ಕ್ರಾಂತಿ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲು ಸಜ್ಜಾಗಿದೆ. ಆ್ಯಕ್ಷನ್ ಮತ್ತು ಮಾಸ್ ಸಿನಿಮಾ ಇದಾಗಿದ್ದು ವಿ ಹರಿಕೃಷ್ಣ ನಿರ್ದೇಶನ ಮಾಡುವರು. ಈ ಹಿಂದೆ ದರ್ಶನ್ ನಟನೆಯ 'ಯಜಮಾನ' ಸಿನಿಮಾ ನಿರ್ಮಾಣ ಮಾಡಿದ್ದ ಶೈಲಜಾ ನಾಗ್ ಮತ್ತು ಬಿ ಸುರೇಶ್ ಅವರೇ ಈ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. 2022 ರ ಡಿಸೆಂಬರ್ 25 ರಂದು ಚಿತ್ರ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇದೆ.
ಇವೆಲ್ಲ ಚಿತ್ರಗಳು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಮೂಡಿ ಬರಲಿವೆ. ಒಂದು ಹೆಜ್ಜೆ ಮುಂದೆ ಹೋಗಿರುವ ಆರ್ ಚಂದ್ರು ಕಬ್ಜ ಚಿತ್ರವನ್ನು ಏಳು ಭಾಷೆಯಲ್ಲಿ ತರುವ ಸಾಹಸ ಮಾಡುತ್ತಿದ್ದಾರೆ. ಇವಷ್ಟೇ ಅಲ್ಲದೇ ತೆರೆಮರೆಯಲ್ಲಿ ಹಲವು ಬಿಗ್ ಬಜೆಟ್ ಚಿತ್ರಗಳು ತೆರೆಗೆ ಬರುವ ಆಲೋಚನೆಯಲ್ಲಿವೆ. ಸಿನಿಮಾಗಳನ್ನು ಭಾಗ 1 ಮತ್ತು ಭಾಗ 2 ಅಂತ ಮಾಡಿ ತೆರೆಗೆ ತರುವ ಹೊಸ ವ್ಯವಸ್ಥೆಯೂ ಕೂಡ ಕೈ ಹಿಡಿಯುತ್ತಿರುವುದನ್ನು ನಾವು ಕಾಣಬಹುದು.
ಇದನ್ನೂ ಓದಿ:ಕಾಂತಾರ ಚಿತ್ರದ ವರಾಹ ರೂಪಂ ಗೀತೆಯ ವಿರುದ್ಧ ಕೃತಿ ಚೌರ್ಯ ಆರೋಪ: ಕಾನೂನು ಕ್ರಮದ ಎಚ್ಚರಿಕೆ