ಕೊಚ್ಚಿ (ಕೇರಳ): ಸಾಕಷ್ಟು ವಿವಾದ ಸೃಷ್ಟಿಸಿರುವ ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಇಂದು ಬಿಡುಗಡೆಯಾಗಿದೆ. ಆದರೆ ಕೇರಳದ ಕೆಲವೇ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ. ಕೊಚ್ಚಿ ನಗರದ ಎರಡು ಚಿತ್ರಮಂದಿರಗಳು ಸಿನಿಮಾ ಪ್ರದರ್ಶನವನ್ನು ರದ್ದುಗೊಳಿಸಿವೆ. ಲುಲು ಮಾಲ್ ಮತ್ತು ಒಬೆರಾನ್ ಮಾಲ್‌ನಲ್ಲಿರುವ ಪಿವಿಆರ್ ಚಿತ್ರಮಂದಿರಗಳು ಮತ್ತು ಸೆಂಟರ್ ಸ್ಕ್ವೇರ್ ಮಾಲ್‌ನಲ್ಲಿರುವ ಸಿನೆಪೊಲಿಸ್ ಥಿಯೇಟರ್ ಪ್ರದರ್ಶನಕ್ಕೆ ತಡೆ ಒಡ್ಡಿದೆ. ಆದರೆ ಯಾವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ಬಹಿರಂಗವಾಗಿಲ್ಲ.
ಈ ಹಿಂದಿನ ಒಪ್ಪಂದದಂತೆ ಕೇರಳದ 50 ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಬಿಡುಗಡೆ ಮುನ್ನವೇ ಅನೇಕರು ಹಿಂದೆ ಸರಿದಿದ್ದರು. ನಂತರ ಕೇವಲ 17 ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆಕಾಣಲು ಒಪ್ಪಿಕೊಂಡಿತು. ಆದರೆ, ಸದ್ಯಕ್ಕೆ ಎಷ್ಟು ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆ ಕಂಡಿದೆ ಎಂಬುದು ಸ್ಪಷ್ಟವಾಗಿಲ್ಲ. ಈ ಮಧ್ಯೆ ಎರ್ನಾಕುಲಂ ಜಿಲ್ಲೆಯಲ್ಲಿ ಕೇವಲ 3 ಥಿಯೇಟರ್‌ಗಳಲ್ಲಿ ಮಾತ್ರ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಕೊಚ್ಚಿ ನಗರದ ಶೆಣೈಸ್, ಕರಿಯಾಡ್‌ನ ಕಾರ್ನಿವಲ್ ಚಿತ್ರಮಂದಿರ ಮತ್ತು ಪಿರವಂನ ದರ್ಶನಾ ಚಿತ್ರಮಂದಿರದಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನಗೊಂಡಿದೆ.
ಈ ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಸೇರಿದಂತೆ ಹಲವರು ನಟಿಸಿದ್ದಾರೆ. ಇಡೀ ಸಿನಿಮಾ ಕಥೆ ಮಂತಾಂತರದ ಸುತ್ತ ಸುತ್ತುತ್ತದೆ. ಹಾಗಾಗಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ನಡೆಸಲಾಗುತ್ತಿದೆ ಎಂದು ಹಲವರು ಆರೋಪಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸಿನಿಮಾದ ವಿರುದ್ಧ ಭಾರಿ ಪ್ರತಿಭಟನೆಯೂ ನಡೆಯುತ್ತಿದ್ದು, ಕೆಲವು ಚಿತ್ರಮಂದಿರಗಳು ಇದೇ ಕಾರಣಕ್ಕಾಗಿ ಪ್ರದರ್ಶನವನ್ನು ಸ್ಥಗಿತಗೊಳಿಸಿದೆ. ವಿಪುಲ್ ಅಮೃತಲಾಲ್ ಶಾ ನಿರ್ಮಾಣದ ಈ ಚಿತ್ರಕ್ಕೆ ವಿವಿಧ ಪಕ್ಷದ ನಾಯಕರು ಪ್ರತಿಕ್ರಿಯಿಸುವುದರೊಂದಿಗೆ ರಾಜಕೀಯ ಗದ್ದಲವನ್ನು ಉಂಟುಮಾಡಿದೆ.