ಕಾಶ್ಮೀರ್ ಫೈಲ್ಸ್ ಸಿನಿಮಾ ತೆರೆಕಂಡ ನಂತರ ಧಾರ್ಮಿಕವಾಗಿ ವಿವಾದಕ್ಕೆ ಕಾರಣವಾದ 'ದಿ ಕೇರಳ ಸ್ಟೋರಿ' ಚಿತ್ರಕ್ಕೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿದೆ. ಸಿನಿಮಾದ ಕುರಿತಾದ ವಿಮರ್ಶೆ, ಕಳಪೆ ಬಾಕ್ಸ್ ಆಫೀಸ್ ಕಲೆಕ್ಷನ್ ಮತ್ತು ಕಾವೇರಿದ ಪ್ರತಿಭಟನೆಗಳ ನಡುವೆ ತಮಿಳುನಾಡಿನ ಚಿತ್ರಮಂದಿರಗಳಲ್ಲಿ ನಿನ್ನೆಯಿಂದ (ಮೇ 7 ) ರಿಂದ ಸಿನಿಮಾ ಪ್ರದರ್ಶನ ನಿಲ್ಲಿಸಲಾಗಿದೆ.
ತಮಿಳುನಾಡು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರ ಸಂಘದ ಅಧ್ಯಕ್ಷ ತಿರುಪ್ಪೂರ್ ಸುಬ್ರಮಣ್ಯಂ ಅವರು ಈ ಕುರಿತು ಮಾತನಾಡಿ, "ಚಿತ್ರವನ್ನು ಪ್ರದರ್ಶಿಸಿದ ಕೆಲವು ಮಲ್ಟಿಪ್ಲೆಕ್ಸ್‌ಗಳು ಇದೀಗ ಪ್ರದರ್ಶನ ಸ್ಥಗಿತಗೊಳಿಸಲು ನಿರ್ಧರಿಸಿವೆ" ಎಂದರು.
"ದಿ ಕೇರಳ ಸ್ಟೋರಿ ಚಲನಚಿತ್ರವನ್ನು ಹೆಚ್ಚಾಗಿ PVR ನಂತಹ ಪ್ಯಾನ್ ಇಂಡಿಯಾ ಗ್ರೂಪ್ ಒಡೆತನದ ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರ ಪ್ರದರ್ಶಿಸಲಾಯಿತು. ಆದ್ರೆ, ಸ್ಥಳೀಯ ಮಾಲೀಕತ್ವದ ಮಲ್ಟಿಪ್ಲೆಕ್ಸ್‌ಗಳು ಚಲನಚಿತ್ರವನ್ನು ಪ್ರದರ್ಶಿಸದಿರಲು ನಿರ್ಧರಿಸಿವೆ. ಜನಪ್ರಿಯ ತಾರೆಗಳು ಸಿನಿಮಾದಲ್ಲಿ ಇಲ್ಲದಿರುವುದೇ ಸ್ಥಳೀಯ ಚಿತ್ರಮಂದಿರಗಳ ನಿರಾಸಕ್ತಿಗೆ ಕಾರಣ. ಕೊಯಮತ್ತೂರಿನಲ್ಲಿ ಶುಕ್ರವಾರ ಮತ್ತು ಶನಿವಾರದಂದು ಚಿತ್ರ ಪ್ರದರ್ಶನಗೊಂಡಿತ್ತು. ಬಳಿಕ, ಪ್ರತಿಭಟನೆಗಳ ಕಾವು ಜೋರಾಗಿದ್ದು, ಬೆದರಿಕೆ ಎದುರಿಸುವುದು ಯೋಗ್ಯವಲ್ಲವೆಂದು ನಿರ್ಧರಿಸಿ, ಪ್ರದರ್ಶನ ಸ್ಟಾಪ್ ಮಾಡಲಾಗಿದೆ"ಎಂದು ಸುಬ್ರಮಣ್ಯಂ ಹೇಳಿದ್ದಾರೆ.
ಇದನ್ನೂ ಓದಿ :‘ದಿ ಕೇರಳ ಸ್ಟೋರಿ’ ಪ್ರದರ್ಶನಕ್ಕೆ ತಡೆಯೊಡ್ಡಿ ಕೋಯಿಕ್ಕೋಡ್ನಲ್ಲಿ ಪ್ರತಿಭಟನೆ: ವಿಡಿಯೋ..
ಅದಾ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ವಿವಾದಾತ್ಮಕ ಕಥಾಹಂದರ ಇದೆ. ಐಸಿಎಸ್ ಭಯೋತ್ಪಾಕದ ಸಂಘಟನೆಗಳ ಸಂಚಿನಿಂದ ಕೇರಳದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರ ಮತಾಂತರ ಮಾಡಲಾಗುತ್ತಿದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ‘ದಿ ಕೇರಳ ಸ್ಟೋರಿ’ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ಜೋರಾಗಿದೆ.
ಏಪ್ರಿಲ್ 6 ರಂದು ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಚೆನ್ನೈನಲ್ಲಿ ಚಿತ್ರದ ಬಿಡುಗಡೆಯನ್ನ ವಿರೋಧಿಸಿ ಪ್ರತಿಭಟನೆ ನಡೆಸಿತು. ನಟ ಮತ್ತು ನಿರ್ದೇಶಕರೂ ಆಗಿರುವ ಸೀಮಾನ್ ಅವರು ಎನ್‌ಟಿಕೆ ಕಾರ್ಯಕರ್ತರೊಂದಿಗೆ ಅಣ್ಣಾನಗರ ಆರ್ಚ್ ಬಳಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. "ದಿ ಕೇರಳ ಸ್ಟೋರಿ" ಸಿನಿಮಾವು ಲವ್ ಜಿಹಾದ್, ಧಾರ್ಮಿಕ ಮತಾಂತರ ಮತ್ತು ಭಯೋತ್ಪಾದನೆಯಂತಹ ಕಥಾವಸ್ತುವನ್ನು ಹೊಂದಿದೆ. ಜೊತೆಗೆ, ಸಿನಿಮಾದಲ್ಲಿ ಕೇರಳ ಮತ್ತು ಮುಸ್ಲಿಮರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ, ಇದರಿಂದ ಕೋಮು ಉದ್ವಿಗ್ನತೆ ಉಂಟಾಗಬಹುದು ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ :ಕೊಚ್ಚಿಯ ಎರಡು ಥಿಯೇಟರ್ನಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ರದ್ದು
ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ಪುಲ್ ಅಮೃತಲಾಲ್ ಶಾ ನಿರ್ಮಿಸಿದ್ದಾರೆ. ಚಲನ ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಸೇರಿದಂತೆ ಹಲವರು ಬಣ್ಣಹಚ್ಚಿದ್ದಾರೆ.
ಇದನ್ನೂ ಓದಿ :40 ಕೋಟಿ ಬಜೆಟ್‌ನಲ್ಲಿ ತಯಾರಾದ 'ದಿ ಕೇರಳ ಸ್ಟೋರಿ' ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?