ಮಧ್ಯಪ್ರದೇಶ: 2022ರಲ್ಲಿ ಚಿತ್ರದ ಬಗ್ಗೆ ಘೋಷಣೆಯಾದಾಗಿನಿಂದಲೂ ಸುದಿಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಸದ್ದು ಮಾಡುತ್ತಲೇ ಇದೆ. ಚಿತ್ರದ ಕಥೆ ಸೂಕ್ಷ್ಮ ವಿಷಯವಾದ ಹಿನ್ನೆಲೆ, ಪರ ವಿರೋಧ ಚರ್ಚೆಗೆ ವೇದಿಕೆ ಸೃಷ್ಟಿಸಿದೆ. ಚಿತ್ರ ಕಥೆ ಕೇರಳದ ಹಿಂದೂ ಮತ್ತು ಮುಸ್ಲಿಂ ಮಹಿಳೆಯರ ಸುತ್ತ ಸುತ್ತುತ್ತದೆ. ಈ ಹಿನ್ನೆಲೆ ದೇಶದ ಹಲವೆಡೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮಧ್ಯಪ್ರದೇಶದ ಬಿಜೆಪಿ ರಾಜ್ಯ ಸಚಿವ ರಾಹುಲ್ ಕೊಠಾರಿ (Rahul Kothari) ಅವರು ಈ ಹಿಂದೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ 'ದಿ ಕೇರಳ ಸ್ಟೋರಿ'ಯನ್ನು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸುವಂತೆ ಪತ್ರ ಬರೆದಿದ್ದರು. ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಹಲವಾರು ಹಿಂದೂ ಸಂಘಟನೆಗಳು ರಾಜ್ಯದಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸುವಂತೆ ಸಿಎಂಗೆ ಒತ್ತಾಯಿಸಿದ್ದವು. ಬಹು ಒತ್ತಾಯದ ಮೇರೆಗೆ ಟ್ಯಾಕ್ಸ್ ಫ್ರೀ ಮಾಡಲು ನಿರ್ಧರಿಸಲಾಗಿದೆ. ಇಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮೂಲಕ ರಾಜ್ಯದಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ.
"ಭಯೋತ್ಪಾದನೆಯ ಭಯಾನಕ ಸತ್ಯವನ್ನು ಬಹಿರಂಗಪಡಿಸುವ 'ದಿ ಕೇರಳ ಸ್ಟೋರಿ' ಚಲನಚಿತ್ರವನ್ನು ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತಗೊಳಿಸಲಾಗುತ್ತಿದೆ" ಎಂದು ಟ್ವೀಟ್ ಮಾಡಿರುವ ಅವರು, ಚಿತ್ರದ ಬಗ್ಗೆ ಸ್ವತಃ ಮಾತನಾಡಿ ವಿಡಿಯೋವನ್ನು ಶೇರ್ ಮಾಡಿದ್ದಾರೆ.
'ದಿ ಕೇರಳ ಸ್ಟೋರಿ' ಸಿನಿಮಾ ಹಲವು ಪ್ರತಿಭಟನೆಗಳು ಮತ್ತು ಭಾರೀ ವಿವಾದಗಳ ನಡುವೆಯೇ ಮೇ 5ರಂದು ಬಿಡುಗಡೆ ಆಗಿದೆ. ಸದ್ಯ ಮಧ್ಯಪ್ರದೇಶ ರಾಜ್ಯದಲ್ಲಿ ತೆರಿಗೆ ಮುಕ್ತ ಮಾಡಲಾಗಿದೆ ಎಂದು ಘೋಷಿಸಲಾಗಿದೆ. ಚಲನಚಿತ್ರವು ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿದೆ. ಕೆಲವರು ಇದನ್ನು 'ಪ್ರಚಾರದ ಚಿತ್ರ' ಎಂದು ಹೇಳಿದ್ದರೆ, ಮತ್ತೊಂದಿಷ್ಟು ಮಂದಿ ಬೆಂಬಲ ಸೂಚಿಸಿ 'ಅಸಾಧಾರಣ' ಚಲನಚಿತ್ರ ಎಂದು ತಿಳಿಸಿದ್ದಾರೆ.