ನಟಿ ಅದಾ ಶರ್ಮಾ ಅಭಿನಯದ 'ದಿ ಕೇರಳ ಸ್ಟೋರಿ' ಟೀಸರ್, ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಜನರ ನಡುವೆ ಚರ್ಚೆ ಹುಟ್ಟು ಹಾಕಿದೆ. ಸಿನಿಮಾ ಬಿಡುಗಡೆಯ ಬಳಿಕ ಸಾಕಷ್ಟು ಪ್ರತಿಭಟನೆ ಮತ್ತು ವಿವಾದಗಳೆದ್ದವು. ಟೀಕೆ, ಟ್ರೋಲ್ಗಳ ಹೊರತಾಗಿಯೂ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುವಲ್ಲಿ ಯಶಸ್ವಿ ಆಗಿದೆ. ಹೌದು, ದಿ ಕೇರಳ ಸ್ಟೋರಿ ಬಿಡುಗಡೆಯಾಗಿ ಒಂದು ತಿಂಗಳಾಯಿತು. ಹೊಸದಾಗಿ ಬಿಡುಗಡೆಯಾಗುತ್ತಿರುವ ಚಿತ್ರಗಳ ನಡುವೆಯೂ 'ದಿ ಕೇರಳ ಸ್ಟೋರಿ' ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವುದನ್ನು ಮುಂದುವರಿಸಿದೆ.
ಒಂದು ತಿಂಗಳ ಸಂಪಾದನೆ ಎಷ್ಟು?:ನಿರ್ದೇಶಕ ಸುದೀಪ್ತೋ ಸೇನ್ ಆ್ಯಕ್ಷನ್ ಕಟ್ ಕೇಳಿರುವ 'ದಿ ಕೇರಳ ಸ್ಟೋರಿ' ಮೇ. 5ರಂದು ಬಿಡುಗಡೆ ಆಯಿತು. ಚಿತ್ರ ತೆರೆಕಂಡು 30ನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ 1.60 ಕೋಟಿ ರೂ. ಗಳಿಸಿದೆ. ಇದರೊಂದಿಗೆ ಚಿತ್ರದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ 234 ಕೋಟಿ ರೂ.ಗೆ ಏರಿದೆ.
2023ರ ಸೂಪರ್ ಹಿಟ್ ಚಿತ್ರ...:ಅಂದಹಾಗೆ, ಈ ಚಿತ್ರ ಬಿಡುಗಡೆ ಆದ ಮೂರು ವಾರಗಳಲ್ಲಿ 200 ಕೋಟಿ ರೂ. ದಾಟಿತ್ತು. ಇದಾದ ನಂತರ ಚಿತ್ರದ ಗಳಿಕೆಯ ವೇಗ ಕೊಂಚ ತಗ್ಗಿತು. 250 ಕೋಟಿ ರೂ.ಗೆ ತಲುಪಲು ಹೆಣಗಾಡುತ್ತಿದೆ. ಆದ್ರೆ ಚಿತ್ರಮಂದಿರಗಳಲ್ಲಿ ಸಿನಿಮಾ ತನ್ನ ಉತ್ತಮ ಪ್ರದರ್ಶನ ಮುಂದುವರಿಸಿದೆ. ಈ ಮೂಲಕ 2023ರ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾಗಿ 'ದಿ ಕೇರಳ ಸ್ಟೋರಿ' ಗುರುತಿಸಿಕೊಂಡಿದೆ.
'ದಿ ಕೇರಳದ ಸ್ಟೋರಿ' ಅತ್ಯಂತ ಹೆಚ್ಚು ಚರ್ಚೆಗೆ ಒಳಗಾದ ಚಿತ್ರಗಳಲ್ಲಿ ಒಂದು. ಇದನ್ನು ಕೆಲವರು 'ಪ್ರಚಾರದ ಚಿತ್ರ' ಎಂದು ಕರೆದರೆ, ಹಲವರು ಚಿತ್ರದ ಕಥೆಗಾಗಿ ಹೊಗಳಿದರು. ಟೀಕಾ ಸಮರ, ಟ್ರೋಲ್ ದಾಳಿ ಹೀಗೆ ವಿವಾದಕ್ಕೊಳಗಾಗಿರುವ 'ದಿ ಕೇರಳ ಸ್ಟೋರಿ'ಯ ಬಾಕ್ಸ್ ಆಫೀಸ್ ಅಂಕಿಅಂಶ ಮಾತ್ರ ಎಲ್ಲರ ಹುಬ್ಬೇರುವಂತೆ ಮಾಡಿದೆ. ಸುದಿಪ್ತೋ ಸೇನ್ ನಿರ್ದೇಶನದ ಚಿತ್ರದಲ್ಲಿ ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರೆ, ಸೋನಿಯಾ ಬಲಾನಿ, ಯೋಗಿತಾ ಬಿಹಾನಿ ಮತ್ತು ಸಿದ್ಧಿ ಇದ್ನಾನಿ ತಾರಾಬಳಗದಲ್ಲಿದ್ದಾರೆ. ವಿಪುಲ್ ಅಮೃತಲಾಲ್ ಶಾ ಚಿತ್ರ ನಿರ್ಮಿಸಿದ್ದಾರೆ. ಕಳೆದ ತಿಂಗಳು ಮೇ. 5 ರಂದು ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆಕಂಡಿತ್ತು.
ಇದನ್ನೂ ಓದಿ:ಸಾಂಪ್ರದಾಯಿಕ ನೋಟಕ್ಕೂ ಸೈ ಎಂದ ಸ್ಯಾಂಡಲ್ವುಡ್ ಗ್ಲ್ಯಾಮರ್ ಗೊಂಬೆ ಪ್ರಣಿತಾ ಸುಭಾಷ್ - ನಿಮಗ್ಯಾವ ನೋಟ ಇಷ್ಟ?!
ಮಂತಾಂತರ ಮತ್ತು ಬಲವಂತವಾಗಿ ಭಯೋತ್ಪಾದಕ ಸಂಘಟನೆಗೆ ಹಿಂದೂ ಮಹಿಳೆಯರನ್ನು ಸೇರಿಸುವ ಕಥೆಯನ್ನು ಚಿತ್ರ ಒಳಗೊಂಡಿದೆ. ನೈಜ ಘಟನೆ ಆಧಾರಿತ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಮತಾಂತರ ವಿಷಯವನ್ನಾಧರಿಸಿದ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಾಜಕಾರಣಿಗಳು, ಕೆಲವು ಗಣ್ಯರೂ ಸೇರಿದಂತೆ ಪ್ರೇಕ್ಷಕರು 'ದಿ ಕೇರಳ ಸ್ಟೋರಿ' ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ:'ಕೆಜಿಎಫ್' ಒಡೆಯನಿಗೆ ಹುಟ್ಟುಹಬ್ಬ: 'ಸಲಾರ್' ಸೆಟ್ನಲ್ಲಿ ಕೇಕ್ ಕತ್ತರಿಸಿದ ಪ್ರಶಾಂತ್ ನೀಲ್- Photos