ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ದಿ ಕೇರಳ ಸ್ಟೋರಿ' ಸಿನಿಮಾ ಹಲವು ಟೀಕೆಗೊಳಗಾಗಿದ್ದರೂ, ವಿವಾದಗಳಿಂದ ಸುತ್ತುವರಿದಿದ್ದರೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರ 2023ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ಸಂಖ್ಯೆ ಕೂಡ ಅತ್ಯುತ್ತಮವಾಗಿ ಸಾಗುತ್ತಿದೆ.
'ದಿ ಕೇರಳ ಸ್ಟೋರಿ' ಚಿತ್ರ ದೇಶಿಯ ಮಾರುಕಟ್ಟೆಯಲ್ಲಿ ಕೇವಲ 12 ದಿನಗಳಲ್ಲಿ 150 ಕೋಟಿ ರೂಪಾಯಿ ಸಂಗ್ರಹಿಸುವಲ್ಲಿ ಯಶಸ್ವಿ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಸಂಖ್ಯೆ ಜೊತೆ ಮುಂದುವರೆಯುತ್ತಿದೆ. ಕೆಲ ಸ್ಟಾರ್ ನಟರ ಸಿನಿಮಾ ಕೂಡ ಈ ಸಾಧನೆ ಮಾಡಿಲ್ಲ. ಈ ವೇಗ ಗಮನಿಸಿದರೆ ಚಿತ್ರವು ಶೀಘ್ರದಲ್ಲೇ 200 ಕೋಟಿ ರೂಪಾಯಿಗಳ ಗಡಿಯನ್ನು ದಾಟುವ ಸಾಧ್ಯತೆಯಿದೆ.
ವಿವಾದಗಳ ನಡುವೆಯೇ 'ದಿ ಕೇರಳ ಸ್ಟೋರಿ' ಮೇ 5ರಂದು ದೇಶಾದ್ಯಂತ ಬಿಡುಗಡೆ ಆಯಿತು. ಸಿನಿಮಾ ತೆರೆಕಂಡ ಬಳಿಕವೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವೆಡೆ ಸಿನಿಮಾ ಮೇಲೆ ನಿಷೇಧ ಹೇರಲಾಯಿತು. ಆದ್ರೂ ಕೂಡ ಸಿನಿಮಾ ಯಶಸ್ವಿ ಆಗಿದೆ. ಬಾಕ್ಸ್ ಆಫೀಸ್ ಓಟ ಮುಂದುವರಿದಿದೆ. ಸುದಿಪ್ತೋ ಸೇನ್ ನಿರ್ದೇಶನದ, ನಟಿ ಅದಾ ಶರ್ಮಾ ಮುಖ್ಯಭೂಮಿಕೆಯ ಈ ಚಲನಚಿತ್ರವನ್ನು ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಿಷೇಧಿಸಲಾಗಿದೆ ಮತ್ತು ತಮಿಳುನಾಡು ರಾಜ್ಯದಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿಲ್ಲ.
ಸಿನಿ ಟ್ರೇಡ್ ವಿಶ್ಲೇಷಕರ ಪ್ರಕಾರ, ದಿ ಕೇರಳ ಸ್ಟೋರಿ ಚಿತ್ರ ಮೇ 16ರಂದು 150 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿದೆ. ದೇಶಿಯ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಒಟ್ಟು ಕಲೆಕ್ಷನ್ ಸಂಖ್ಯೆ 156.84 ಕೋಟಿ ರೂಪಾಯಿ. ಅದಾ ಶರ್ಮಾ ಅಭಿನಯದ ಚಿತ್ರ ಇನ್ನೊಂದು ವಾರದಲ್ಲಿ 200 ಕೋಟಿ ರೂ. ದಾಟಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.