ಸುದಿಪ್ತೋ ಸೇನ್ ನಿರ್ದೇಶನದ, ಅದಾ ಶರ್ಮಾ ಅಭಿನಯದ 'ದಿ ಕೇರಳ ಸ್ಟೋರಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. 2023ರ ಟಾಪ್ ಕಲೆಕ್ಷನ್ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರ ತನ್ನ ಸ್ಥಾನವನ್ನು ಭದ್ರಪಡಿಸಿಸಿಕೊಂಡಿದೆ. ಬಿಡುಗಡೆಗೂ ಮುನ್ನವೇ ಚಲನಚಿತ್ರವು ವಿವಾದಕ್ಕೊಳಗಾಯಿತು. ಈ ಚಿತ್ರಕಥೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ ಚಿತ್ರಮಂದಿರಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್ ಸಂಖ್ಯೆ ಏರಿಕೆ ಕಾಣುತ್ತಿದೆ. ಸಿನಿಮಾ ಈವರೆಗೆ 147.04 ಕೋಟಿ ಕಲೆಕ್ಷನ್ ಮಾಡಿದೆ ಎಂದು ವ್ಯವಹಾರ ತಜ್ಞ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ಈ ಚಲನಚಿತ್ರವು ಶೀಘ್ರದಲ್ಲೇ 2023ರ ಎರಡನೇ ಅತಿ ಹೆಚ್ಚು ಗಳಿಕೆಯ ಬಾಲಿವುಡ್ ಚಲನಚಿತ್ರವಾಗಿ ಹೊರಹೊಮ್ಮುವ ಲಕ್ಷಣಗಳಿವೆ. ಬಾಲಿವುಡ್ ಸೂಪರ್ ಸ್ಟಾರ್ಗಳಾದ ರಣ್ಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಮುಖ್ಯಭೂಮಿಕೆಯ, ಲವ್ ರಂಜನ್ ಅವರ ತು ಜೂಟಿ ಮೆ ಮಕ್ಕರ್ ಸಿನಿಮಾ ಕಲೆಕ್ಷನ್ ಅನ್ನು ಶೀಘ್ರವೇ ಮೀರಿಸಲಿದೆ.
ಸಿನಿ ಉದ್ಯಮದ ಟ್ರ್ಯಾಕರ್ ಓರ್ವರ ಪ್ರಕಾರ, 'ದಿ ಕೇರಳ ಸ್ಟೋರಿ' ಬಿಡುಡೆ ಆದ ಬಳಿಕ ಎರಡನೇ ಸೋಮವಾರದಂದು 10 ಕೋಟಿ ರೂ ಗಳಿಸಿತು, ಚಿತ್ರದ ಒಟ್ಟು ಕಲೆಕ್ಷನ್ ಸುಮಾರು 146.74 ಕೋಟಿ ರೂ. ಆಗಿದೆ. ಸಿನಿಮಾದ ಎರಡನೇ ವಾರಾಂತ್ಯ ಕೂಡ ಬಾಕ್ಸ್ ಆಫೀಸ್‌ನಲ್ಲಿ ಮೊದಲ ವಾರಾಂತ್ಯಕ್ಕಿಂತ ಉತ್ತಮವಾಗಿತ್ತು. ಮೊದಲ ಶನಿವಾರದ ಗಳಿಕೆ 11.22 ಕೋಟಿ ರೂಪಾಯಿ. ಅದಕ್ಕೆ ಹೋಲಿಸಿದರೆ, ಎರಡನೇ ಶನಿವಾರದಂದು 19.50 ಕೋಟಿ ರೂ. ಗಳಿಸಿದೆ. ಕಳೆದ ಭಾನುವಾರ 16.40 ಕೋಟಿ ರೂ. ಗಳಿಸಿತ್ತು. ಈ ಭಾನುವಾರದಂದು 23.75 ಕೋಟಿ ರೂ. ಸಂಪಾದಿಸಿದೆ ಎಂದು ಹೇಳಿದ್ದಾರೆ. ಚಿತ್ರ ತೆರೆಕಂಡು 11 ದಿನಗಳಾಗಿದ್ದು, ದಿನೇ ದಿನೆ ಕಲೆಕ್ಷನ್ ಸಂಖ್ಯೆ ಏರುತ್ತಿದೆ. ಸಿನಿಮಾ ಉತ್ತಮ ಪ್ರದರ್ಶನ ಕಾಣುವುದನ್ನು ಮುಂದುವರಿಸಿದೆ.