ಸಾಕಷ್ಟು ವಿವಾದಗಳ ನಡುವೆಯೂ ಸುದಿಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಬಾಕ್ಸ್ ಆಫೀಸ್ ಸಂಖ್ಯೆ ದಿನೇ ದಿನೆ ಏರುತ್ತಿದೆ. 2023ರ ಯಶಸ್ವಿ ಚಿತ್ರಗಳ ಪೈಕಿ 'ದಿ ಕೇರಳ ಸ್ಟೋರಿ' ಅಗ್ರ ಕ್ರಮಾಂಕದಲ್ಲಿದೆ.
ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ದಿ ಕೇರಳ ಸ್ಟೋರಿ ಈ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿ ಹೊರಹೊಮ್ಮಿದೆ. ಚಿತ್ರವು ಮೇ. 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವೆಡೆ ಆಕ್ರೋಶವೂ ಭುಗಿಲೆದ್ದಿತ್ತು. ಆದ್ರೆ ಬಾಕ್ಸ್ ಆಫೀಸ್ ಸಂಖ್ಯೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಸಿನಿಮಾ ತೆರೆಕಂಡ 27ನೇ ದಿನಕ್ಕೆ ಒಟ್ಟು ಸಂಗ್ರಹ 230 ಕೋಟಿ ರೂ. ದಾಟಿದೆ. ಈ ಮೂಲಕ 2023ರ ಯಶಸ್ವಿ ಚಿತ್ರಗಳ ಸಾಲಿಗೆ ಸೇರಿದೆ. ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಕೂಡ ವಿವಾದಗಳನ್ನು ಎದುರಿಸಿ, 1,000 ಕೋಟಿ ರೂ. ಸಂಗ್ರಹಿಸುವಲ್ಲಿ ಯಶಸ್ವಿ ಆಗಿತ್ತು. ಪಠಾಣ್ 2023ರ ಮೊದಲ ಯಶಸ್ವಿ ಚಲನಚಿತ್ರ.
ಸುದೀಪ್ತೋ ಸೇನ್ ನಿರ್ದೇಶನದ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಗೂ ಮುನ್ನ ವಿವಾದಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ಕಲೆಕ್ಷನ್ ಮೇಲೆ ಅನುಮಾನವಿತ್ತು. ಆದ್ರೀಗ ಕೇವಲ 27 ದಿನಗಳಲ್ಲಿ 230 ಕೋಟಿ ರೂ. ಬಾಚಿದೆ. ಅನೇಕ ವಿವಾದಗಳ ಹೊರತಾಗಿಯೂ, ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿ ಯಶಸ್ವಿಯಾಗಿದೆ. 'ದಿ ಕೇರಳ ಸ್ಟೋರಿ'ಯ ದೇಶೀಯ ಬಾಕ್ಸ್ ಆಫೀಸ್ ಕಲೆಕ್ಷನ್ ನಿಧಾನವಾಗಿದ್ದರೂ, ಚಿತ್ರಮಂದಿರಗಳಲ್ಲಿ ಓಟ ಮುಂದುವರಿಸಿದೆ. ಮತಾಂತರದಂತಹ ಗಂಭೀರ ವಿಷಯವನ್ನು ಆಧರಿಸಿದ ಈ ಚಿತ್ರ ನೈಜ ಘಟನೆ ಆಧಾರಿತ ಎಂದು ಚಿತ್ರತಂಡ ಹೇಳಿದೆ.