ವಿವಾದಗಳ ನಡುವೆ ಶುಕ್ರವಾರ ತೆರೆಕಂಡಿರುವ 'ದಿ ಕೇರಳ ಸ್ಟೋರಿ' ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರೆಸಿದೆ. ವಿವಾದ, ಪ್ರತಿಭಟನೆ, ಆಕ್ರೋಶಗಳನ್ನು ಎದುರಿಸಿ ಈ ಚಿತ್ರ ದೇಶಾದ್ಯಂತ ಬಿಡುಗಡೆಯಾಗಿದೆ. ಹಲವೆಡೆ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ. ಸಿನಿಮಾ ಬಗ್ಗೆ ರಾಜ್ಯದಲ್ಲಿ ಪ್ರಚಾರ, ಭಾಷಣ ಮಾಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಹೊಗಳಿದ್ದರು. ಈ ಬಗ್ಗೆ ಚಿತ್ರದ ನಟಿ ಅದಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಸುದಿಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಚಿತ್ರದ ನಟಿ ಅದಾ ಶರ್ಮಾ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರಕ್ಕೆ ಸಂಬಂಧಿಸಿದ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 'ಸಿನಿಮಾ ಹಾಲ್‌ಗಳಲ್ಲಿ ಸ್ಟ್ಯಾಂಡಿಂಗ್ ಒವೇಶನ್, ಗೌರವಾನ್ವಿತ ಪಿಎಂ ಅವರು ನಮ್ಮ ಚಿತ್ರ 'ದಿ ಕೇರಳ ಸ್ಟೋರಿ' ಬಗ್ಗೆ ಮಾತನಾಡಿದ್ದಾರೆ. ವಿಮರ್ಶಕರು ಮತ್ತು ಪ್ರೇಕ್ಷಕರು ನನ್ನ ಅಭಿನಯವನ್ನು ಮೆಚ್ಚಿದ್ದಾರೆ. ನಿಮ್ಮಲ್ಲಿ ಹಲವರು ಹೌಸ್‌ಫುಲ್ ಸಂದೇಶಗಳನ್ನು ನನಗೆ ನೀಡಿದ್ದೀರಿ. ಬಂಪರ್ ಓಪನಿಂಗ್, ನಾನು ಇಷ್ಟು ದೊಡ್ಡ ಕನಸು ಕಾಣಲು ಸಾಧ್ಯವೇ ಇಲ್ಲ. ನನ್ನ ಕನಸುಗಳೆಲ್ಲ ನನಸಾಗುತ್ತಿವೆ ಎಂದು ಪೋಸ್ಟ್ ಮಾಡಿದ್ದಾರೆ.
ಕೆಲವರು ನಮ್ಮ 'ದಿ ಕೇರಳ ಸ್ಟೋರಿ' ಅನ್ನು ಪ್ರಚಾರದ ಚಲನಚಿತ್ರ ಎಂದು ಕರೆಯುತ್ತಾರೆ. ಹಲವಾರು ಭಾರತೀಯ ಸಂತ್ರಸ್ತರ ಕ್ಷಣಗಳನ್ನು ವೀಕ್ಷಿಸಿದ ನಂತರವೂ ಈ ಘಟನೆಗಳು ನಡೆದೇ ಇಲ್ಲ ಎಂದು ಹೇಳುತ್ತಿದ್ದಾರೆ. ನಿಮ್ಮಲ್ಲಿ ನನ್ನದೊಂದು ವಿನಮ್ರ ವಿನಂತಿ, ಗೂಗಲ್ನಲ್ಲಿ ISIS ಮತ್ತು Brides ಪದಗಳನ್ನು ಸರ್ಚ್ ಮಾಡಿ, ಬಿಳಿ ಹುಡುಗಿಯರು ಮಾತನಾಡಿರುವ ವಿಡಿಯೋ, ಆರ್ಟಿಕಲ್ ಸಿಗಬಹುದು, ಅದನ್ನು ನೋಡಿದ್ರೆ ನಮ್ಮ ಭಾರತೀಯ ಚಲನಚಿತ್ರ ನಿಜ ಎಂದು ನಿಮಗೆ ಅನಿಸಬಹುದು ಎಂದು ತಿಳಿಸಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ ನೀವು 'ದಿ ಕೇರಳ ಸ್ಟೋರಿ' ನೋಡುವಷ್ಟು ಧೈರ್ಯಶಾಲಿಯೇ? ಎಂದು ಬರೆದಿದ್ದಾರೆ. ಅವರು ಶೇರ್ ಮಾಡಿರುವ ಪೋಸ್ಟರ್ನಲ್ಲಿ, ಹಿತವೆನಿಸದಿದ್ದರೂ ಕೆಲ ಕಥೆಗಳನ್ನು ಹೇಳಲೇಬೇಕಾಗುತ್ತದೆ ಎಂದು ಬರೆದಿದೆ.