ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ 'ದ ಎಲಿಫೆಂಟ್ ವಿಸ್ಪರರ್ಸ್' ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಡಾಕ್ಯುಮೆಂಟರಿಯ ಮುಖ್ಯ ಪಾತ್ರಧಾರಿಗಳಾದ ಬೊಮ್ಮನ್ ಮತ್ತು ಬೆಳ್ಳಿಗೆ ಇಂಡಿಗೋ ವಿಮಾನದಲ್ಲಿ ಊಟಿಗೆ ಪ್ರಯಾಣಿಸುತ್ತಿರುವ ವೇಳೆ ವಿಶೇಷ ಸ್ವಾಗತವನ್ನು ಪಡೆದರು. ತಮಿಳುನಾಡು ರಾಜ್ಯದ ಸಣ್ಣ ಹಳ್ಳಿಯೊಂದರಿಂದ ಬಂದ ಈ ದಂಪತಿಯನ್ನು ಇಂಡಿಗೋ ಸಿಬ್ಬಂದಿ ಅಭಿನಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
"ನಿಮ್ಮಲ್ಲಿ ಕೆಲವರಿಗೆ ತಿಳಿದಿಲ್ಲದಿರಬಹುದು. ಆಸ್ಕರ್ನಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು 'ದ ಎಲಿಫೆಂಟ್ ವಿಸ್ಪರರ್ಸ್' ಪಡೆದುಕೊಂಡಿದೆ ಮತ್ತು ಈ ಡಾಕ್ಯುಮೆಂಟರಿಯ ಮುಖ್ಯ ಪಾತ್ರದಾರಿಗಳು ಇಂದು ನಮ್ಮೊಂದಿಗಿದ್ದಾರೆ. ಅವರಿಗೊಂದು ಚಪ್ಪಾಳೆ ನೀಡಿ" ಎಂದು ಪೈಲೆಟ್ ಹೇಳಿದರು. ಈ ವೇಳೆ ಪ್ರಯಾಣಿಕರು ಚಪ್ಪಾಳೆ ತಟ್ಟಿ ದಂಪತಿಯನ್ನು ಹುರಿದುಂಬಿಸಿದರು. ಈ ವಿಡಿಯೋ ಅನೇಕ ಹೃದಯಗಳನ್ನು ಗೆದ್ದಿದೆ. ಇಂಡಿಗೋ ಸಿಬ್ಬಂದಿಗಳ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು "ಇದು ಅತ್ಯುತ್ತಮ ವಿಡಿಯೋಗಳಲ್ಲಿ ಒಂದಾಗಿದೆ. ಬೊಮ್ಮನ್ ಮತ್ತು ಬೆಳ್ಳಿ ಎಲ್ಲಾ ಪ್ರೀತಿಗೂ ಅರ್ಹರು" ಎಂಬುದಾಗಿ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:'ದ ಎಲಿಫೆಂಟ್ ವಿಸ್ಪರರ್ಸ್': ಮರಿ ಆನೆ ನೋಡಲು ಮುದುಮಲೈ ಶಿಬಿರಕ್ಕೆ ಪ್ರವಾಸಿಗರ ದಂಡು
'ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ 'ದ ಎಲಿಫೆಂಟ್ ವಿಸ್ಪರರ್ಸ್' ಜೊತೆಗೆ ‘ಹಾಲ್ ಔಟ್’, ‘ಹೌ ಡು ಯು ಮೆಷರ್ ಎ ಈಯರ್?' ಮತ್ತು 'ದಿ ಮಾರ್ಥಾ ಮಿಚೆಲ್ ಎಫೆಕ್ಟ್’ ಹಾಗೂ ‘ಸ್ಟ್ರೇಂಜರ್ ಅಟ್ ದಿ ಗೇಟ್’ ಡಾಕ್ಯುಮೆಂಟರಿಗಳು ನಾಮನಿರ್ದೇಶನಗೊಂಡಿದ್ದವು. ಅಂತಿಮವಾಗಿ ಭಾರತದ 'ದ ಎಲಿಫೆಂಟ್ ವಿಸ್ಪರರ್ಸ್' ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿತು.