ಇಂದು ಕನ್ನಡದ ಬಹುನಿರೀಕ್ಷಿತ 2 ಸಿನಿಮಾಗಳು ಬಿಡುಗಡೆ ಆಗುತ್ತಿವೆ. ನವರಸ ನಾಯಕ ಜಗ್ಗೇಶ್ ಅಭಿನಯದ 'ರಾಘವೇಂದ್ರ ಸ್ಟೋರ್ಸ್' ಮತ್ತು ವಿಜಯ್ ರಾಘವೇಂದ್ರ ನಟನೆಯ 'ರಾಘು' ಚಿತ್ರ ತೆರೆ ಕಾಣುತ್ತಿದೆ. ಇದಲ್ಲದೇ ಪ್ಯಾನ್ ಇಂಡಿಯಾ 'ಪೊನ್ನಿಯನ್ ಸೆಲ್ವನ್ 2' ಸಿನಿಮಾ ಅದ್ಧೂರಿಯಾಗಿ ಬಿಡುಗಡೆಗೊಳ್ಳಲಿದೆ. ಅಖಿಲ್ ಅಕ್ಕಿನೇನಿ ಅಭಿನಯದ 'ಏಜೆಂಟ್' ತೆಲಗು ಚಿತ್ರ ಕೂಡ ಇಂದು ಚಿತ್ರಮಂದಿರಕ್ಕೆ ಬರುತ್ತಿದೆ.
ಜಗ್ಗೇಶ್ ಅಭಿನಯದ 'ರಾಘವೇಂದ್ರ ಸ್ಟೋರ್ಸ್': ನವರಸ ನಾಯಕ ಜಗ್ಗೇಶ್ ಅಭಿನಯದ ಹಾಸ್ಯ ಸಿನಿಮಾ 'ರಾಘವೇಂದ್ರ ಸ್ಟೋರ್ಸ್' ಇಂದು ತೆರೆ ಕಾಣುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಪ್ರೇಕ್ಷಕರಿಗೆ ಭಾರೀ ಮನರಂಜನೆ ನೀಡುವ ಸೂಚನೆ ನೀಡಿದೆ. ಚಿತ್ರಕ್ಕೆ ರಾಜಕುಮಾರ ಸಿನಿಮಾ ಖ್ಯಾತಿಯ ಸಂತೋಷ್ ಆನಂದ್ ರಾಮ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಜಗ್ಗೇಶ್ ಅವರು 40 ವರ್ಷ ದಾಟಿದರೂ ಮದುವೆಯಾಗದ ಸಿಂಗಲ್ ಸುಂದರನಾಗಿ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಜಗ್ಗೇಶ್ ಜೊತೆ ದತ್ತಣ್ಣ, ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ಶ್ವೇತಾ ಶ್ರೀವಾತ್ಸವ್ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ. ಚಿತ್ರದ ಮೇಲೆ ಬಹು ನಿರೀಕ್ಷೆ ಇದೆ.
'ರಾಘು'ವಾಗಿ ಚಿನ್ನಾರಿ ಮುತ್ತ:ವಿಭಿನ್ನ ಕಂಟೆಂಟ್ ಜೊತೆಗೆ ಥ್ರಿಲ್ ನೀಡುವ 'ರಾಘು' ಸಿನಿಮಾದಲ್ಲಿ ವಿಜಯ ರಾಘವೇಂದ್ರ ಒಬ್ಬರೇ ಇದ್ದಾರೆ. ಯುವ ನಿರ್ದೇಶಕ ಎಂ ಆನಂದ್ ರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ 'ರಾಘು' ಸಿನಿಮಾ ಕನ್ನಡದ ಮಟ್ಟಿಗೆ ಪ್ರಯೋಗಾತ್ಮಕ ಚಿತ್ರವಾಗಿದೆ. ಡಿಕೆ ಎಸ್ ಸ್ಟುಡಿಯೋ, ಕೋಟಾ ಫಿಲಂ ಫ್ಯಾಕ್ಟರಿ ಪ್ರೊಡಕ್ಷನ್ ಅಡಿ ರಾಘು ಸಿನಿಮಾವನ್ನು ರನ್ವಿತ್ ಶಿವಕುಮಾರ್ ಹಾಗೂ ಅಭಿಷೇಕ ಕೋಟ ನಿರ್ಮಾಣ ಮಾಡಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿದ್ದು, ಉದಯ್ ಲೀಲಾ ಛಾಯಾಗ್ರಹಣ, ವಿಜತೇತ್ ಚಂದ್ರ ಸಂಕಲನ, ರಿತ್ವಿಕ್ ಮುರುಳಿದರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಸೂರಜ್ ಜೋಯಿಸ ಸಂಗೀತ ನಿರ್ದೇಶನ ಮಾಡಿರುವ ಚಿತ್ರದ ಎರಡು ಹಾಡುಗಳಿಗೆ ವಾಸುಕಿ ವೈಭವ್ ಹಾಗೂ ಆಲ್ ಓಕೆ ಧ್ವನಿಯಾಗಿದ್ದಾರೆ.