ತಮಿಳು ಚಿತ್ರರಂಗದ ಸೂಪರ್ಸ್ಟಾರ್ ದಳಪತಿ ವಿಜಯ್ ಸಾಲು ಸಾಲು ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇತ್ತೀಚೆಗಷ್ಟೇ 'ಲಿಯೋ' ಚಿತ್ರದ ಮೂಲಕ ವಿಶ್ವದಾದ್ಯಂತ ಧೂಳೆಬ್ಬಿಸಿದ್ದ ಹೀರೋ ಸದ್ಯ 'ದಳಪತಿ 68' ವರ್ಕಿಂಗ್ ಟೈಟಲ್ನಲ್ಲಿ ತಯಾರಾಗುತ್ತಿರುವ ಸಿನಿಮಾ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶಿಸುತ್ತಿದ್ದಾರೆ. ಹೈ ಬಜೆಟ್ನಲ್ಲಿ ಸಿದ್ಧಗೊಳ್ಳುತ್ತಿರುವ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆಯಂತೆ. ಈಗಾಗಲೇ ಚಿತ್ರದ ಶೂಟಿಂಗ್ ಕೂಡ ಪ್ರಾರಂಭವಾಗಿದೆ. ಅದರ ಭಾಗವಾಗಿ ವಿಜಯ್ 3D VFX ಸ್ಕ್ಯಾನ್ ಅನ್ನು ಯುಎಸ್ನಲ್ಲಿ ತೆಗೆದುಕೊಂಡಿದ್ದಾರೆ.
ಇತ್ತೀಚೆಗಿನ ಮಾಹಿತಿ ಪ್ರಕಾರ, ವಿಜಯ್ ಅವರು ಕಥೆಯ ಭಾಗವಾಗಿ ಸುಮಾರು 10 ನಿಮಿಷಗಳ ಕಾಲ ವಿಂಟೇಜ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟನ ವಯಸ್ಸನ್ನು ಕಡಿಮೆ ಮಾಡಲು ಚಿತ್ರತಂಡ ಡಿ-ಏಜಿಂಗ್ ತಂತ್ರಜ್ಞಾನವನ್ನು ಬಳಸುತ್ತಿದೆ. ವಿದೇಶಿ ತಜ್ಞರ ನೆರವಿನಿಂದ ಸುಮಾರು 6 ಕೋಟಿ ರೂಪಾಯಿ ಖರ್ಚು ಮಾಡಿ ವಿಜಯ್ ತಮ್ಮ ವಯಸ್ಸನ್ನು ಕಡಿಮೆ ಮಾಡಿಕೊಳ್ಳಲಿದ್ದಾರಂತೆ. ದಳಪತಿ ವಿಜಯ್ ಇದುವರೆಗೆ ಮಾಡಿದ ಸಾಮಾನ್ಯ ಕಮರ್ಷಿಯಲ್ ಸಿನಿಮಾಗಳಿಗಿಂತ ಭಿನ್ನವಾಗಿ ಈ ಚಿತ್ರವು ಮೂಡಿಬರಲಿದೆ. ವಿಜಯ್ ಯಂಗ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.
ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಡಿ-ಏಜಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ. ಬಾಲಿವುಡ್ನಲ್ಲಿ ಶಾರುಖ್ ಖಾನ್ ಅವರ ಸಿನಿಮಾದಲ್ಲಿ ಯೂಸ್ ಮಾಡಲಾಗಿತ್ತು. 'ಫ್ಯಾನ್' ಚಿತ್ರದಲ್ಲಿ ಕಿಂಗ್ ಖಾನ್ ವಯಸ್ಸನ್ನು ಕಡಿಮೆ ಮಾಡಿ ತೋರಿಸಲಾಗಿತ್ತು. ಈ ಸಿನಿಮಾದಲ್ಲಿ ಶಾರುಖ್ ತರಾನೇ ಇರುವ ಗೌರವ್ ಪಾತ್ರಕ್ಕೆ ಡಿ-ಏಜಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ. ಹಾಲಿವುಡ್ನಲ್ಲಿ ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ, ಸಿವಿಲ್ ವಾರ್, ಡೆಡ್ ಮೆನ್ ಟೆಲ್ ನೋ ಟೇಲ್ಸ್, ಆಂಟ್ ಮ್ಯಾನ್ ಸೇರಿದಂತೆ ಇತರೆ ಸುಮಾರು ಚಿತ್ರಗಳಲ್ಲಿ ಬಳಸಲಾಗಿದೆ. ಇದೀಗ ದಳಪತಿ ವಿಜಯ್ ಅವರ ಸಿನಿಮಾದಲ್ಲೂ ಡಿ-ಏಜಿಂಗ್ ತಂತ್ರಜ್ಞಾನದ ಪ್ರಯೋಗ ನಡೆಯಲಿದೆ.