ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ (ಟಿಎಫ್ಸಿಸಿ) ಖ್ಯಾತ ನಿರ್ಮಾಪಕ ದಿಲ್ ರಾಜು ಆಯ್ಕೆಯಾಗಿದ್ದಾರೆ. ರಾಜು ನೇತೃತ್ವದ ಗುಂಪು ಮತ್ತು ಸಿ ಕಲ್ಯಾಣ್ ನೇತೃತ್ವದ ಗುಂಪಿನ ಮಧ್ಯೆ ನಡೆದ ತೀವ್ರ ಪೈಪೋಟಿಯಲ್ಲಿ ದಿಲ್ ರಾಜು ಗೆದ್ದಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಾಜು ಅವರು 48 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಕಲ್ಯಾಣ್ 31 ಮತಗಳನ್ನು ಪಡೆದರು.
ಉಪಾಧ್ಯಕ್ಷರಾಗಿ ಮುತ್ಯಾಲ ರಾಮದಾಸು, ಕಾರ್ಯದರ್ಶಿಯಾಗಿ ಕೆ ಎಲ್ ದಾಮೋದರ ಪ್ರಸಾದ್, ಟಿ ಪ್ರಸನ್ನಕುಮಾರ್ ಖಜಾಂಚಿಯಾಗಿ ಆಯ್ಕೆಯಾದರು. ಟಿಎಫ್ಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಕಾರ್ಯಕಾರಿ ಸಮಿತಿ, ಪ್ರದರ್ಶಕರ ವಲಯ, ವಿತರಕರ ವಲಯ, ಸ್ಟುಡಿಯೋ ವಲಯ ಮತ್ತು ನಿರ್ಮಾಪಕರ ವಲಯದ ಮತದಾರರಿಗೆ ದಿಲ್ ರಾಜು ಧನ್ಯವಾದ ಅರ್ಪಿಸಿದರು.
ರಾಜು ಮತ್ತು ಅವರ ಸಮಿತಿಯ ಆರು ಸದಸ್ಯರು, 12 ಸದಸ್ಯರ ನಿರ್ಮಾಪಕ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು. 20 ಸದಸ್ಯರ ಪ್ರೊಡ್ಯೂಸರ್ ಸೆಕ್ಟರ್ ಕೌನ್ಸಿಲ್‌ನಲ್ಲಿ ಈ ಸಮಿತಿಯು ಬಹುಪಾಲು ಸ್ಥಾನಗಳನ್ನು ಗೆದ್ದಿದೆ. ಕಲ್ಯಾಣ್ ಮತ್ತು ದಿಲ್ ರಾಜು ಅವರ ಎರಡೂ ಗುಂಪುಗಳು ವಿತರಕರ ಸಮಿತಿಯಲ್ಲಿ ತಲಾ ಆರು ಸ್ಥಾನಗಳನ್ನು ಗೆದ್ದವು.
ಸ್ಟುಡಿಯೋ ಕಾರ್ಯಕಾರಿ ಸಮಿತಿಯಲ್ಲಿ ದಿಲ್ ರಾಜು ಅವರ ಗುಂಪು ನಾಲ್ಕರಲ್ಲಿ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. 16 ಸದಸ್ಯರ ಪ್ರದರ್ಶಕರ ಕಾರ್ಯಕಾರಿ ಸಮಿತಿಯಲ್ಲಿ ರಾಜು ಮತ್ತು ಕಲ್ಯಾಣ್ ತಲಾ ಎಂಟು ಸ್ಥಾನಗಳನ್ನು ಗೆದ್ದಿದ್ದಾರೆ. ಇದಕ್ಕೂ ಮುನ್ನ ಒಟ್ಟು 1,600 ಸದಸ್ಯರ ಪೈಕಿ 1,339 ಸದಸ್ಯರು ಫಿಲಂ ನಗರದಲ್ಲಿರುವ ಫಿಲ್ಮ್ ಚೇಂಬರ್ ಕಚೇರಿಯಲ್ಲಿ ಮತದಾನ ಮಾಡಿದರು. ಭಾನುವಾರ ಮತದಾನ ಪ್ರಕ್ರಿಯೆ ನಡೆಯಿತು.