ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ ವೇದ ಚಿತ್ರ ಡಿಸೆಂಬರ್ 23ರಂದು ಬಿಡುಗಡೆಯಾಗಿ ನಿರೀಕ್ಷೆಯಂತೆ ಯಶಸ್ಸು ಕಂಡಿದೆ. ಚಿತ್ರಕ್ಕೆ ಹೊರ ರಾಜ್ಯಗಳಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು. ಇಂದು ತೆಲುಗು ಅವತರಣಿಕೆಯಲ್ಲೂ ವೇದ ಬಿಡುಗಡೆ ಆಗಿದ್ದು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ನಟ ಶಿವರಾಜ್ ಕುಮಾರ್ ಹಲವು ವಿಚಾರಗಳನ್ನು ಹಂಚಿಕೊಂಡರು.
ತೆಲುಗು ಚಿತ್ರೋದ್ಯಮ, ಪ್ರೇಕ್ಷಕರೊಂದಿಗೆ ನಿಮ್ಮ ಸಂಪರ್ಕವೇನು? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, "ನನಗೆ ಈ ಇಂಡಸ್ಟ್ರಿಯೊಂದಿಗೆ, ಇಲ್ಲಿನ ಪ್ರೇಕ್ಷಕರೊಂದಿಗೆ ಹಲವು ವರ್ಷಗಳ ಒಡನಾಟವಿದೆ. ರಾಮ್‌ಗೋಪಾಲ್ ವರ್ಮಾ ನಿರ್ದೇಶನದ ನನ್ನ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಜೊತೆಗೆ ಇನ್ನೂ ಕೆಲ ಚಿತ್ರಗಳು ತೆಲುಗಿನಲ್ಲಿ ಬಿಡುಗಡೆಯಾಗಿವೆ. ನಂದಮೂರಿ ಬಾಲಕೃಷ್ಣ ಅವರ 100ನೇ ಚಿತ್ರ 'ಗೌತಮಿಪುತ್ರ ಶಾತಕರ್ಣಿ'ಯಲ್ಲಿಯೂ ನಟಿಸಿದ್ದೇನೆ. ಈ ಇಂಡಸ್ಟ್ರಿಯಿಂದ ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ಎನ್ಟಿಆರ್ ಅವರಂಥ ಉತ್ತಮ ಸ್ನೇಹಿತರು ಇದ್ದಾರೆ. ಇಲ್ಲಿನ ಉಳವಚಾರು ಬಿರಿಯಾನಿ ನನಗೆ ಬಹಳ ಇಷ್ಟ" ಎಂದು ತಿಳಿಸಿದರು.
'ವೇದ' ಕಥೆಯೇನು, ನಿಮ್ಮ ಪಾತ್ರ ಹೇಗಿರಲಿದೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಉತ್ತಮ ಸಂದೇಶವುಳ್ಳ ಕಮರ್ಷಿಯಲ್ ಚಿತ್ರ ಇದಾಗಿದೆ. ಕುಟುಂಬದಲ್ಲಿನ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ. ಪ್ರೀತಿ, ಸಂತೋಷ, ವಿಶ್ವಾಸ ಹೀಗೆ ಎಲ್ಲದರ ಬಗ್ಗೆ ಹೇಳಲಾಗಿದೆ. ಸ್ತ್ರೀ ಶಕ್ತಿಯನ್ನು ತೆರೆಯ ಮೇಲೆ ತರುವ ಪ್ರಯತ್ನ ಆಗಿದೆ" ಎಂದರು.
ಟ್ರೇಲರ್ ನೋಡಿದರೆ ಸಿನಿಮಾದಲ್ಲಿ ಆ್ಯಕ್ಷನ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂಬ ಮಾತಿಗೆ ಪ್ರತಿಕ್ರಿಯಿಸುತ್ತಾ, "ಇದು ಸಂಪೂರ್ಣ ಸಾಹಸಮಯ ಚಿತ್ರವಲ್ಲ. ಇದರಲ್ಲಿ ಆ್ಯಕ್ಷನ್ ಜೊತೆಗೆ ಭಾವನೆಗಳ ಅನಾವರಣವಾಗಿದೆ. ಚಿತ್ರದಲ್ಲಿ ಮಹಿಳೆಯರು ಹೋರಾಡುತ್ತಾರೆ. ಸಿನಿಮಾ ವೀಕ್ಷಿಸಿದಾಗ ನಿಮಗಿದು ಅರ್ಥವಾಗುತ್ತದೆ. ಸಮಾಜದಲ್ಲಿ ಮಹಿಳೆಯರು ಸವಾಲುಗಳನ್ನು ಎದುರಿಸುತ್ತಾ ಬಂದಿದ್ದಾರೆ. ಅವರು ಗಟ್ಟಿಯಾಗಿ ನಿಲ್ಲಬೇಕು, ನಾವು ಅವರನ್ನು ಪ್ರೋತ್ಸಾಹಿಸಬೇಕು, ಈ ಎಲ್ಲಾ ವಿಷಯಗಳನ್ನು ಚಿತ್ರದಲ್ಲಿ ಹೆಣೆಯಲಾಗಿದೆ" ಎಂದು ವಿವರಿಸಿದರು.