ಕೆಸಿಸಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಬಳಿಕ ಚಂದನವನದಲ್ಲಿ ಕ್ರಿಕೆಟ್ ಫೀವರ್ ಜೋರಾಗಿದೆ. ಟೆಲಿವಿಷನ್ ಕ್ರಿಕೆಟ್ ಪ್ರೀಮಿಯರ್ ಲೀಗ್ನ ಎರಡನೇ ಸೀಸನ್ ಮಾರ್ಚ್ 12ರಿಂದ ಆರಂಭವಾಗಿತ್ತು. ಮಾರ್ಚ್ 12 ರಿಂದ 15ರವರೆಗೆ ನಾಲ್ಕು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆದಿದೆ. ಈ ಟೆಲಿವಿಷನ್ ಕ್ರಿಕೆಟ್ ಪ್ರೀಮಿಯರ್ ಲೀಗ್ 2ರಲ್ಲಿ ಕಿರುತೆರೆ ನಟ ಹರ್ಷ ಸಿ.ಎಂ ಗೌಡ ಅವರ ತಂಡಕ್ಕೆ ಕಪ್ ಒಲಿದಿದೆ.
ಈ ಟೆಲಿವಿಷನ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್ 2ರ ಸಮಾರೋಪ ಸಮಾರಂಭಕ್ಕೆ ತೆಲುಗು ನ್ಯಾಚುರಲ್ ಸ್ಟಾರ್ ನಾನಿ ಸ್ಪೆಷಲ್ ಗೆಸ್ಟ್ ಆಗಿ ಆಗಮಿಸಿದ್ದರು. ಕಿರುತೆರೆ ನಟ ಹರ್ಷ ಸಿ.ಎಂ ಗೌಡ ತಂಡಕ್ಕೆ ಟ್ರೋಫಿ ಹಸ್ತಾಂತರಿಸಿದರು. ದಸರಾ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿರುವ ನಾನಿ ಈ ಸಮಾರಂಭಕ್ಕೆ ಸಾಕ್ಷಿಯಾದರು.
ಬಳಿಕ ಮಾತನಾಡಿದ ನಟ ನಾನಿ, ನಾನು ಈ ಕಾರ್ಯಕ್ರಮಕ್ಕೆ ಬರುವುದಕ್ಕೆ ಮುಖ್ಯ ಕಾರಣ ನಟ ದೀಕ್ಷಿತ್. ಏಕೆಂದರೆ ದಸರಾ ಸಿನಿಮಾದಲ್ಲಿ ನನ್ನ ಜೊತೆ ಅವರೂ ಕೂಡ ಅಭಿನಯಿಸಿದ್ದಾರೆ. ಆ ಗೆಳತನಕ್ಕೆ ನಾನು ಈ ಪ್ರೋಗ್ರಾಂಗೆ ಬರುವಂತೆ ಆಯಿತು. ಹಾಗೇ ದಸರಾ ಸಿನಿಮಾ ಕೂಡ ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
ಟೆಲಿವಿಷನ್ ಕ್ರಿಕೆಟ್ ಪ್ರೀಮಿಯರ್ ಲೀಗ್ 2 ಎನ್ 1 ಕ್ರಿಕೆಟ್ ಅಕಾಡೆಮಿ ಸುನೀಲ್ ಕುಮಾರ್ ಬಿ ಆರ್ ಸಾರಥ್ಯದ ಕಿರುತೆರೆ ತಾರೆಯರ ಟೆಲಿವಿಷನ್ ಪ್ರೀಮಿಯರ್ ಲೀಗ್ಗೆ ಅದ್ಧೂರಿ ತೆರೆ ಬಿದ್ದಿದೆ. ಹರ್ಷ ಸಿ.ಎಂ ಗೌಡ ನೇತೃತ್ವದ ಎನಿಹೆಲ್ಪ್ ಟೂರ್ನಿವಲ್ ತಂಡ ಟಿಪಿಎಲ್ ಸೀಸನ್ -2 ಟ್ರೋಫಿ ಮುಡಿಗೇರಿಸಿಕೊಂಡಿದೆ.
ಎನ್ 1 ಕ್ರಿಕೆಟ್ ಅಕಾಡೆಮಿ ಸುನೀಲ್ ಕುಮಾರ್ ಬಿ.ಆರ್ ಕಳೆದ ವರ್ಷದಿಂದ ಕಿರುತೆರೆ ತಾರೆಯರ ಟೆಲಿವಿಷನ್ ಪ್ರೀಮಿಯರ್ ಲೀಗ್ (ಟಿಪಿಎಲ್) ಆರಂಭಿಸಿದ್ದಾರೆ. ಈ ಬಾರಿ ಎರಡನೇ ಸೀಸನ್ ಮಾರ್ಚ್ 12ರಿಂದ 15ರವರೆಗೆ ಅಂದ್ರೆ ನಾಲ್ಕು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಮಂಜು ಪಾವಗಡ ನೇತೃತ್ವದ ಅಶ್ವಸೂರ್ಯ ರಿಯಾಲಿಟೀಸ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಗಾಯಕ ವ್ಯಾಸರಾಜ್ ಮ್ಯಾನ್ ಆಫ್ ದಿ ಸಿರೀಸ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಕ್ರೇಜಿ ಸ್ಟಾರ್ ರವಿಚಂದ್ರನ್ ಭೇಟಿ ಮಾಡಿದ ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ..
ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಎನಿಎಲ್ಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಸೇರಿ ಒಟ್ಟು ಆರು ತಂಡಗಳು ಟಿಪಿಎಲ್ ಸೀಸನ್ 2ರಲ್ಲಿ ಭಾಗವಹಿಸಿದ್ದವು. ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ ನಾಯಕತ್ವದಲ್ಲಿ ತಂಡಗಳನ್ನು ಮುನ್ನಡೆಸಲಾಗಿತ್ತು.
ಇದನ್ನೂ ಓದಿ:'ದಸರಾ' ಆಚರಿಸುತ್ತಿರುವ ನ್ಯಾಚುರಲ್ ಸ್ಟಾರ್ ನಾನಿ
ಮಾರ್ಚ್ 30ರಂದು ನಾನಿ ಅಭಿನಯದ ದಸರಾ ಸಿನಿಮಾ ಬಿಡುಗಡೆ ಆಗಲಿದೆ. ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ಅಡಿ ಸುಧಾಕರ್ ಚೆರುಕುರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶ್ರೀಕಾಂತ್ ಒಡೆಲಾ ಚೊಚ್ಚಲ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದ್ದು, ಖ್ಯಾತ ನಟಿ ಕೀರ್ತಿ ಸುರೇಶ್ ಅವರು ನಾನಿ ಜೋಡಿಯಾಗಿ ತೆರೆ ಹಂಚಿಕೊಂಡಿದ್ದಾರೆ.